ಬೆಂಗಳೂರು : ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೆ ಕಾರ್ಯಕ್ಕಾಗಿ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆಯಲು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆ ಅಧಿಕಾರಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಶುಕ್ರವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಸರ್ವೆ ಮಾಡಲು ಹೆಚ್ಚು ಭೂಮಾಪಕರ ಅವಶ್ಯಕತೆಯಿದ್ದು, ಕಂದಾಯ ಇಲಾಖೆಯ ಅಡಿ ಬರುವ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಪತ್ರ ಬರೆದು ಹೆಚ್ಚು ಭೂಮಾಪಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರದಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಸರ್ವೆ ನಡೆಸಿ ಮಾರ್ಕ್ ಮಾಡಿ, ತಹಶೀಲ್ದಾರ್ ಅವರಿಂದ ಆದೇಶಗಳನ್ನು ಜಾರಿ ಮಾಡಿರುವಂತಹ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಉಚ್ಛನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲು ಹೇಳಿದರು.
ನಿಗದಿತ ಸಮಯದಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿಗಳನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಒತ್ತುವರಿಗಳನ್ನು ಗುರುತಿಸಿದ ನಂತರ ತಹಶೀಲ್ದಾರ್ಗಳು ಒತ್ತುವರಿದಾರರಿಗೆ ಆದೇಶಗಳನ್ನು ನೀಡಿದ ಬಳಿಕ ಪಾಲಿಕೆ ಹಾಗೂ ಕಂದಾಯ ಇಲಾಖೆಯು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಿದೆ ಎಂದರು.
ನಗರದಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆ ಸಕ್ರಿಯವಾಗಿ ನಡೆಯುತ್ತಿದ್ದು, ಕಳೆದ 15 ದಿನಗಳಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಬರುವ ಎಬಿಕೆ, ಗುಂಜೂರು, ಕರಿಯಮ್ಮನ ಅಗ್ರಹಾರ, ಬೆಳ್ಳತ್ತೂರಿನಲ್ಲಿ ಹಾಗೂ ಕೆ.ಆರ್ ಪುರದ ಸರ್ವೆ ಸಂಖ್ಯೆ 69ರಲ್ಲಿ ಇರುವ 3 ಅಂತಸ್ತಿನ ಕಟ್ಟಡದಲ್ಲಿ ಬರುವ 10 ಮಳಿಗೆಗಳು ಸೇರಿದಂತೆ 62 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನು ಯಲಹಂಕ ವಲಯ ವ್ಯಾಪ್ತಿಯಲ್ಲಿ 8 ಒತ್ತುವರಿಗಳು ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 5 ಒತ್ತುವರಿಗಳು ಸೇರಿದಂತೆ ಒತ್ತು 25 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.