ಬೆಳಗಾವಿ : ಬೆಂಗಳೂರಿನಲ್ಲಿ ತಲೆಯೆತ್ತುತ್ತಿರುವ ಹುಕ್ಕಾಬಾರ್ (Hukka bar) ಗಳ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ (Belagavi winter session) ಚರ್ಚೆಯಾಯಿತು. ಬಿಜೆಪಿ (BJP) ಶಾಸಕರಾದ ಸಿ.ಕೆ.ರಾಮಮೂರ್ತಿ (C K Ramamurthy) ಮತ್ತು ಎಸ್. ಸುರೇಶ್ ಕುಮಾರ್ (S Sureshkumar) ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವ ಪರಮೇಶ್ವರ್ (G Parameshwar) ಅವರನ್ನು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಸಿ.ಕೆ. ರಾಮಮೂರ್ತಿ ದೆಹಲಿ ಹೊರತುಪಡಿಸಿದರೆ ಬೆಂಗಳೂರು ಅತಿ ಹೆಚ್ಚು ಹುಕ್ಕಾ ಬಾರ್ ಗಳನ್ನು ಹೊಂದಿರುವ ನಗರವಾಗಿದೆ. ನಗರದ ಯುವಜನತೆ ದುರ್ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ನಗರದ ವಿದ್ಯಾರ್ಥಿಗಳನ್ನೂ ಸಹ ದಾರಿತಪ್ಪಿಸುವ ಕೆಲಸಕ್ಕೆ ಹುಕ್ಕಾಬಾರ್ ಗಳು ಕೈ ಹಾಕಿವೆ ಎಂದು ಆರೋಪಿಸಿದರು. ಜೊತೆಗೆ ಅಕ್ಟೋಬರ್ ನಲ್ಲಿ ಕೋರಮಂಗಲದ ಹುಕ್ಕಾಬಾರ್ ನಡೆದ ಅಗ್ನಿದುರಂತದ ಬಗ್ಗೆಯೂ ಪ್ರಸ್ತಾಪಿಸಲಾಯಿತು.
ಇದಕ್ಕೆ ಉತ್ತರ ನೀಡಿದ ಗೃಹಸಚಿವ ಜಿ. ಪರಮೇಶ್ವರ್ ಇದಕ್ಕೆ ಎಫ್‌ಎಸ್‌ಎಐ ಪರವಾನಗಿ ನೀಡುತ್ತದೆ. ಹುಕ್ಕಾಬಾರ್ ಗಳಿಗೆ ಬಿಬಿಎಂಪಿ ಅನುಮತಿ ಬೇಕಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿರುವಂತೆ ಹುಕ್ಕಾಬಾರ್ ಸ್ಥಾಪನೆಗೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದರು.