ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತ ಮಹಿಳೆಯನ್ನು ಭೇಟಿ ಆರೋಗ್ಯ ವಿಚಾರಿಸಿದ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಿದರು.
ಸಂತ್ರಸ್ತ ಮಹಿಳೆ ಸಚಿವ ಸತೀಶ್ ಜಾರಕಿಹೊಳಿ ಅವರ ಎದುರು ನಡೆದ ಘಟನೆ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಸಂತ್ರಸ್ತ ಮಹಿಳೆ ಕುಟುಂಬಸ್ಥರು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಸಚಿವರಿಗೆ ಮನವಿ ಮಾಡಿದರು.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಸಂತ್ರಸ್ತ ಮಹಿಳೆ ಹಾಗೂ ಸಂತ್ರಸ್ತ ಮಹಿಳೆಯ ಕುಟುಂಬಸ್ಥರ ಮನವಿ ಆಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಬಸಪ್ಪ ನಾಯಕ್, ಚಿಕ್ಕಪ್ಪರಾದ ರಾಜು ನಾಯಕ್, ಯಲ್ಲಪ್ಪ ನಾಯಕ್, ಯುವತಿ ಸಹೋದರರಾದ ಕೆಂಪಣ್ಣ, ಲಕ್ಕಪ್ಪ, ತಾಯಿ ಪಾರ್ವತಿ, ಗಂಗವ್ವ ವಾಲಿಕಾರ್, ಸಂಗೀತಾ ಹೆಗ್ಗನಾಯಕ್, ಶೋಭಾ ನಾಯಕ್, ಲಕ್ಕವ್ವ ನಾಯಕ್, ಇಬ್ಬರು ಬಾಲಾಪರಾಧಿ ಸೇರಿ 12 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏಳು ಜನರನ್ನ ಕಾಕತಿ ಪೊಲೀಸರು ಬಂಧಿಸಿದ್ದು, 4 ಜನ ಮಹಿಳಾ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.