ಬೆಳಗಾವಿ : ತುಳಿತಕ್ಕೆ ಒಳಗಾದವನ್ನು ಒಡೆಯುವ ಕೆಲಸ ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸೂಚ್ಯವಾಗಿ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಮಾತಮಾಡಿದ ಅವರು, ಬೆಂಗಳೂರಿನಲ್ಲಿ ಬಿಲ್ಲವ ಈಡಿಗರ ಸಮಾವೇಶ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿದರು.
ಸಮುದಾಯ ಒಡೆಯಲು ಈ ಸಮಾವೇಶ ನಡೆದಿದೆ ಎಂಬ ದಾಟಿಯಲ್ಲಿ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದುಳಿದ ವರ್ಗಗಳ ಜಾತಿ ಗಣತಿ ಆಗಬೇಕು ಎಂದಿದ್ದಾರೆ. ಯಾವುದೇ ಸಮುದಾಯ ಒಡೆಯುವ ಕೆಲಸ ಆಗಬಾರದು. ಸಮಾವೇಶದಲ್ಲಿ ಸಮಾಜದ ಎಲ್ಲಾ ಸ್ವಾಮೀಜಿಗಳು ಬಂದರೆ ಒಗ್ಗಟ್ಟು ಸಾಧ್ಯ. ಆದರೆ ಎಲ್ಲಾ ಸ್ವಾಮೀಜಿಗಳು ಇರಲಿಲ್ಲ, ಇದು ತಪ್ಪು ಎಂಬ ಅಭಿಪ್ರಾಯ ಸ್ವಾಮೀಜಿಗಳು ವ್ಯಕ್ತಪಡಿಸಿದ್ದರು. ಅವರ ಕೋರಿಕೆಯ ಮೇರೆಗೆ ನಾನು ಸಮಾವೇಶಕ್ಕೆ ಹೋಗಿಲ್ಲ ಎಂದು ಹೇಳಿದರು.
ನಮ್ಮನ್ನು ಟಾರ್ಗೆಟ್ ಮಾಡುವ ಉದ್ದೇಶ ಇದೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ನಮ್ಮ ಸಮುದಾಯದಲ್ಲಿ ಇನ್ನೊಬ್ಬ ನಾಯಕನಾಗುತ್ತಾನೆ ಎಂದರೆ ಬಹಳ ಸಂತೋಷ. ಸೈಡ್ ಲೈನ್ ಮಾಡುವುದು ಟಾರ್ಗೆಟ್ ಮಾಡುವುದನ್ನು ಬಹಳ ವರ್ಷದಿಂದ ನೋಡಿದ್ದೇನೆ. ನನ್ನನ್ನು ಟಾರ್ಗೆಟ್, ಸೈಡ್ ಲೈನ್ ಮಾಡುವವರು ಭ್ರಮನಿರಸನದಲ್ಲಿ ಇರಬೇಕು ಎಂದರು.
ಸಮಾವೇಶದಲ್ಲಿ ಏನು ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಿಲ್ಲ. ಗುರು ನಾರಾಯಣ ಅಧ್ಯಯನ ಪೀಠ ಈಗಾಗಲೇ ಪ್ರಾರಂಭ ಆಗಿದೆ. ಅದನ್ನು ಪ್ರಾರಂಭ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಯಾರೋ ತಪ್ಪುದಾರಿಗೆ ಎಳೆದಿದ್ದಾರೆ. ನನ್ನ ಅನುದಾನದಲ್ಲಿ 50 ಲಕ್ಷ ರೂ. ಕೊಟ್ಟು ಪ್ರಾರಂಭ ಮಾಡಿದ್ದೇನೆ. ಅರ್ಧದಲ್ಲಿ ನಿಂತಿದ್ದು ಪೂರ್ಣ ಮಾಡಲು 2 ಕೋಟಿ ಕೊಡಿ ಎಂದು ಕೇಳಿದ್ದೇನೆ. ಎರಡು ವರ್ಷದಿಂದ ಓಡಾಡುತ್ತಿದ್ದೇನೆ ಎಂದು ಹೇಳಿದರು.