ಬೆಳಗಾವಿ: ಸಾವರ್ಕರ್ ಫೋಟೋ ತೆರವಿನ ಕೂಗಿನ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ ಭಾವಚಿತ್ರ ಸರಿಪಡಿಸುವ ಹಾಗೂ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್ ಯು ಟಿ ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಸಭಾಭವನದಲ್ಲಿ ಬಸವೇಶ್ವರರ ಭಾವ ಚಿತ್ರವನ್ನು ಹಾಕಲಾಗಿದೆ. ಹಾಲಿ ಇರುವ ಭಾವ ಚಿತ್ರದ ಬದಲಾಗಿ ಮೂಲ ಕಿರೀಟ ಧರಿಸಿರುವ ಬಸವೇಶ್ವರರ ಭಾವ ಚಿತ್ರವನ್ನು ಅಳವಡಿಸುವಂತೆ ಕೋರಿದ್ದೇನೆ. ಮಹಾತ್ಮ ಗಾಂಧಿಯವರ ಫೋಟೋವನ್ನು ಕೆಳಗಡೆ ಹಾಕಲಾಗಿದ್ದು, ಭಾರತದ ಪಿತಾಮಹ ಎಂದು ಹೆಸರು ಪಡೆದಿರುವ ಇವರ ಫೋಟೋವನ್ನು ಬದಲಾವಣೆ ಮಾಡಿ ಶ್ರೀ ಬಸವೇಶ್ವರರ ಭಾವ ಚಿತ್ರದ ಪಕ್ಕದಲ್ಲಿಯೇ ಹಾಕಬೇಕು ಎಂದು ಕೋರಿದ್ದೇನೆ ಎಂದರು.
ಸುಭಾಷ್ ಚಂದ್ರಬೋಸ್ ಅವರು ದೋತಿ ಮತ್ತು ಶರ್ಟು ಧರಿಸಿರುವ ಫೋಟೋ ಹಾಕಲಾಗಿದೆ. ಇದು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದೆ. ಅವರ ಭಾವ ಚಿತ್ರವನ್ನು ಬದಲಾಯಿಸಿ ಅವರು ಸೇನಾ ಸಮವಸ್ತ್ರದಲ್ಲಿ ಇರುವ ಭಾವಚಿತ್ರ ಅಳವಡಿಸಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅವರ ನಿಜ ರೂಪದಲ್ಲಿರುವುದಿಲ್ಲ. ಆದ್ದರಿಂದ ಅವರ ಭಾವ ಚಿತ್ರವನ್ನು ಬದಲಾಯಿಸಿ ಸಂವಿಧಾನದ ಪುಸ್ತಕ ಹಿಡಿದಿರುವ ಭಾವ ಚಿತ್ರವನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಭಾವಚಿತ್ರವನ್ನು ಸುವರ್ಣ ವಿಧಾನಸೌಧ ಬೆಳಗಾವಿ ಸಭಾ ಭವನದಲ್ಲಿ ಹಾಕಬೇಕು. ಪಂಡಿತ ಜವಹರಲಾಲ್ ನೆಹರು ಇವರು ಕೂಡ ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರು ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿ ಸುಮಾರು 17 ವರ್ಷಗಳ ಕಾಲ ಭಾರತದ ಆಡಳಿತವನ್ನು ನಡೆಸಿದವರು. ಇವರ ಭಾವಚಿತ್ರವನ್ನು ಸಭಾ ಭವನದಲ್ಲಿ ಹಾಕಬೇಕು ಎಂದು ಕೋರಲಾಗಿದೆ ಎಂದು ತಿಳಿಸಿದರು.