ವಿಜಯಪುರ: ‘ಐಸಿಸ್ ಭಯೋತ್ಪಾದಕರೊಂದಿಗೆ ನಂಟಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಆರೋಪಕ್ಕೆ ಒಳಗಾಗಿರುವ ಜಮಾತ್ ಎ ಅಹಲೆ ಸುನ್ನತ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ಮೌಲ್ವಿ ತನ್ವೀರ್ ಹಾಶ್ಮಿ ಅವರು ಇಲ್ಲಿನ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್ ಹೋಟೆಲ್’ನ ಪಾಲುದಾರರು.
ಅಷ್ಟೇ ಅಲ್ಲ, ನಗರದ ಹೊರವಲಯದ ಮಹಲ್ ಐನಾಪುರ ಗ್ರಾಮದಲ್ಲಿ ಹಾದು ಹೋಗಿರುವ ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಅವರಿಬ್ಬರ ಮನೆಗಳು, ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲಿವೆ. ಆದರೆ, ಈಗ ಒಮ್ಮೆಲೇ ಯಾಕೆ ಇಬ್ಬರಲ್ಲಿ ವೈಮನಸ್ಸು ಮೂಡಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ನಡೆದಿದೆ.
ಇದೇ ವಿಷಯದ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು, ‘ಟೂರಿಸ್ಟ್ ಹೋಟೆಲ್‌ನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮೌಲ್ವಿ ತನ್ವೀರ್ ಹಾಶ್ಮಿ ಅವರ ಕುಟುಂಬದವರು ಪಾಲುದಾರರು. ಹೀಗಿರುವಾಗ ಮೌಲ್ವಿ ವಿರುದ್ಧ ಆರೋಪಿಸುವ ನೈತಿಕತೆ ಯತ್ನಾಳರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಮೌಲ್ವಿಯವರು ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಸುಮ್ಮನಿದ್ದರು? ಅವರು ಆರೋಪ ಸಾಬೀತು ಪಡಿಸಬೇಕು, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯ ಸರ್ಕಾರವು ಅವರ ವಿರುದ್ಧ ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.