ಹೈದರಾಬಾದ್: ಬಿಆರ್‌ಎಸ್ ನಾಯಕ ಹಾಗೂ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಎರ್ರವೆಲ್ಲಿಯ ತಮ್ಮ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅವರನ್ನು ಗುರುವಾರ ತಡರಾತ್ರಿ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ದಿದ್ದರಿಂದ ಅವರ ಸೊಂಟದ ಮೂಳೆ ಮುರಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಪರೀಕ್ಷೆಗಳ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕಾ ಬೇಡವೇ ಎಂಬ ಬಗ್ಗೆ ಡಾಕ್ಟರ್ಗಳು ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಟ್ವೀಟ್ ಮಾಡಿ ಮಾಹಿತಿ ನೀಡಿದ ಕೆ ಕವಿತಾ: ತೆಲಂಗಾಣ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಅವರ ಪುತ್ರಿ ಕೆ.ಕವಿತಾ ಟ್ವೀಟ್ ಮಾಡಿದ್ದಾರೆ “ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಅವರಿಗೆ ಸಣ್ಣ ಗಾಯವಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಜ್ಞರ ಆರೈಕೆಯಲ್ಲಿದ್ದಾರೆ. ಜನರ ಬೆಂಬಲ ಮತ್ತು ಶುಭಾಶಯಗಳ ಮಹಾಪೂರದಿಂದ, ನಮ್ಮ ತಂದೆ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ” ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.