ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಬಳಿ ರೈತರು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆಗಮಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮತ್ತು ಕೃಷಿ ಸಚಿವ ಚೆಲುವರಾಯಸ್ವಾಮಿ ಸಮಸ್ಯೆ ಆಲಿಸಿದರು.
ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಚನ್ನಮ್ಮ ವೃತ್ತದಿಂದ ಪಾದಯಾತ್ರೆ ಮೂಲಕ ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಸಂಜೆ 6 ಗಂಟೆಯಾದರೂ ಸಂಬಂಧಿಸಿದ ಸಚಿವರು ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಬ್ಯಾರಿಕೇಡ್ ತಳ್ಳಲು ಮುಂದಾದರು. ಈ ವೇಳೆ ರೈತರನ್ನು ಪೊಲೀಸರು ತಡೆದರು. ಸಚಿವರು ಟೆಂಟ್ ಕಡೆ ಬರುತ್ತಿದ್ದಾರೆ ಎಂದು ಪೋಲಿಸರು ಹೇಳಿದ ಬಳಿಕ ಸ್ಥಳಕ್ಕೆ ಮರಳಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ನನ್ನ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಪ್ರಸ್ತಾಪ ಮಾಡಿದ್ದೀರಿ. ಕೃಷಿಗೆ ಸಂಬಂಧಿಸಿ ಎರಡ್ಮೂರು ವಿಚಾರಗಳನ್ನು ನನ್ನ ಗಮನಕ್ಕೆ ತಂದಿದ್ದೀರಿ. ಸಕ್ಕರೆ ಆಯುಕ್ತರ ಕಚೇರಿಯ ಸುಧಾರಣೆ ಮಾಡಲಾಗುವುದು. ಕಬ್ಬು ತೂಕದಲ್ಲಿ ಮೋಸದ ಬಗ್ಗೆ ಅನೇಕ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಯಾವ ಕಾರ್ಖಾನೆ ರೈತರಿಗೆ ತೂಕದ ಮೇಲೆ ಮೋಸ ಮಾಡುತ್ತೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ. ಈ ಬಗ್ಗೆ ರೈತರು ದೂರು ಕೊಡಲು ಹಿಂದೇಟು ಹಾಕಬಾರದು ಎಂದರು.
ರಾಜ್ಯದ ಎಲ್ಲ ಕಾರ್ಖಾನೆಗಳಲ್ಲಿ ಸರ್ಕಾರದ ವತಿಯಿಂದ ತೂಕದ ಯಂತ್ರ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತೇವೆ. ಎಲೆಕ್ಟ್ರಾನಿಕ್ ತೂಕದ ಯಂತ್ರ ಪರಿವರ್ತನೆಗೆ ಈಗಾಗಲೇ ತಿಳಿಸಿದ್ದೇವೆ. ಇಲ್ಲವಾದರೆ ನೋಟಿಸ್ ಕೊಡಲು ಸಿದ್ಧತೆ ನಡೆದಿದೆ. ಒಂದು ಕಾಲದಲ್ಲಿ ಕಾರ್ಖಾನೆ ಮಾಲೀಕರು ಕಬ್ಬು ಒಯ್ಯುತ್ತಿರಲಿಲ್ಲ. ನೀವು ಎಷ್ಟೇ ಕಬ್ಬು ಬೆಳೆಯಿರಿ, ನುರಿಸುವ ಶಕ್ತಿ ನಮ್ಮ ರಾಜ್ಯಕ್ಕೆ ಬಂದಿದೆ. ಸಕ್ಕರೆ ಕಾರ್ಖಾನೆ ಮಾಲೀಕ ಶಾಸಕನೇ ಇರಲಿ, ಮಂತ್ರಿನೇ ಇರಲಿ, ಆ ಕಾರ್ಖಾನೆಯಿಂದ ಮೋಸ ಆಗಿದೆ ಅಂತಾ ದೂರು ಕೊಡಿ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಲಾಭಾಂಶ ವರದಿ ನೀಡಿ ಎಂದಿದ್ದೇನೆ. ಆ ಲಾಭಾಂಶ ತಮಗೆ ಕೊಡಿಸಲು ಕ್ರಮ ಕೈಗೊಳ್ಳುವೆ. ಕಬ್ಬಿಗೆ 5 ಸಾವಿರ ರೂ.ವರೆಗೆ ಬೆಲೆ ಸಿಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೀರಿ. ಇದಕ್ಕಿಂತ ಹೆಚ್ಚಿನ ಬೆಲೆ ಸಿಗಬೇಕು ಎಂಬುದು ನನ್ನ ಆಸೆ ಎಂದು ಶಿವಾನಂದ ಪಾಟೀಲ್ ನುಡಿದರು.