ಬೆಳಗಾವಿ: ಕೃಷಿ ಪಂಪ್ ಸೆಟ್‌ಗಳಿಗೆ ಮೂಲಸೌಕರ್ಯ ಒದಗಿಸುವ ವೆಚ್ಚನ್ನು ರೈತರೇ ಭರಿಸಬೇಕು ಎಂಬ ಆದೇಶ ಪರಿಷ್ಕರಿಸುವ ಪ್ರಸ್ತಾವನೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿಂದೆ ಕೃಷಿ ಪಂಪ್ ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸಲು, ವೆಚ್ಚವನ್ನು ರೈತರೇ ಭರಿಸಬೇಕು ಎಂದು ಸರಕಾರ ತೀರ್ಮಾನಿಸಿ, ಅ.7ಕ್ಕೆ ಆದೇಶ ಹೊರಡಿಸಿತ್ತು. ಇದಕ್ಕೆ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಆದ್ದರಿಂದ ಇಂಧನ ಇಲಾಖೆ ಅಧಿಕಾರಿಗಳಿಗೆ ಆದೇಶ ಮರು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿತ್ತು. ರೈತರು ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ (ಟಿ.ಸಿ.) ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾಗುವ ವೆಚ್ಚವನ್ನು ರೈತರ ಬದಲಿಗೆ ಇಂಧನ ಇಲಾಖೆಗಳ ಎಸ್ಕಾಂಗಳೇ ಭರಿಸಬೇಕು ಎಂಬ ಪ್ರಸ್ತಾವನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.