ಬೆಳಗಾವಿ: ತೀವ್ರ ಬರಗಾಲ ಹಿನ್ನೆಲೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಸುವರ್ಣ ಗಾರ್ಡನ್ ಟೆಂಟ್ವರೆಗೆ ರೈತರ ಬೃಹತ್ ಪಾದಯಾತ್ರೆ ಆರಂಭವಾಯಿತು.
ರಾಣಿ ಚೆನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ರೈತರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಸಾಥ್ ಕೊಟ್ಟರು. ಚೆನ್ನಮ್ಮ ವೃತ್ತದಿಂದ ಪಾದಯಾತ್ರೆ ಆರಂಭಿಸಿದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ರೈತರ ಸಂಪೂರ್ಣ ಸಾಲಮನ್ನಾ, ಮಹದಾಯಿ ಯೋಜನೆ ಜಾರಿ, ಸ್ವಾಮಿನಾಥನ್ ವರದಿ ಜಾರಿ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ ರೈತರು ರಸ್ತೆ ಮೇಲೆ ಬಾರುಕೋಲಿನಿಂದ ಬಾರಿಸಿ, ಬಾಯಿ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದರೂ ರೈತರ ಬೇಡಿಕೆಗಳು ಮಾತ್ರ ಈಡೇರುತ್ತಿಲ್ಲ. ತುರ್ತಾಗಿ ಬರದಿಂದ ಕಂಗೆಟ್ಟಿರುವ ರೈತರಿಗೆ ದೊಡ್ಡ ಮಟ್ಟದ ಪರಿಹಾರವನ್ನು ಸರ್ಕಾರ ಘೋಷಿಸಬೇಕು. ಅದೇ ರೀತಿ ಬರವನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆಯೂ ಚಿಂತಿಸಬೇಕು. ಈಗ ಪಾದಯಾತ್ರೆ ಮೂಲಕ ಹೋರಾಟ ಆರಂಭಿಸಿದ್ದೇವೆ. ಸದನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಈ ಭಾಗದ ಮಹದಾಯಿ ಸೇರಿ ಪ್ರಮುಖ ನೀರಾವರಿ ಯೋಜನೆಗಳು ಶೀಘ್ರವೇ ಆಗಬೇಕಿದೆ ಎಂದರು.
ಪಾದಯಾತ್ರೆ ಮಾಡದಂತೆ ಪೊಲೀಸರು ತಡೆಯಲು ಯತ್ನಿಸಿದರೂ ಕೂಡ ರೈತರು ಮಾತ್ರ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್ ಪ್ರತಿಭಟನೆ ಟೆಂಟ್ ವರೆಗೂ ಸಾವಿರಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.