ಬೆಳಗಾವಿ : ಸುವರ್ಣಸೌಧ ವಿಧಾನಸಭೆಯಿಂದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ತೆಗೆದರೆ ಸೂಕ್ತ. ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ಸಾವರ್ಕರ್ ಫೋಟೋ ತೆರವುಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ ಇಲ್ಲವೋ, ಸ್ವಾಭಿಮಾನದ ಬದುಕಿಲ್ಲವೋ ಅದನ್ನು ನಾನು ಒಪ್ಪಲ್ಲ. ಗಾಂಧಿ ಹತ್ಯೆಗೆ ಪ್ರೇರಣೆಯಾದ ತತ್ವವನ್ನು ಒಪ್ಪಲ್ಲ. ಹೀಗಾಗಿ ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ಆದರೆ ನಿಯಮಾನುಸಾರವೇ ಮಾಡಬೇಕು. ಅದು ನಮ್ಮ ಕೈಯಲ್ಲಿ ಇಲ್ಲ. ಸ್ಪೀಕರ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ವಿಧಾನಸಭೆಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಫೋಟೋ ಹಾಕಬೇಕು. ಅವರು ಮೂರು ಸಾವಿರ ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ದೇಶವನ್ನು ಆಳಿ ವೈಜ್ಞಾನಿಕ ಮನೋಭಾವ ಬೆಳೆಸಿದ್ದಾರೆ. ಸಾವರ್ಕರ್ ಇತಿಹಾಸ ಅಶ್ವತ್ಥ ನಾರಾಯಣ ಅವರಿಗಿಂತ ಚೆನ್ನಾಗಿ ನನಗೆ ಗೊತ್ತಿದೆ. ಬಿಜೆಪಿಯವರಿಗೆ ಆರ್ಎಸ್ಎಸ್ ಇತಿಹಾಸ ಗೊತ್ತಾ?. ಅವರಿಗೆ ಸಾವರ್ಕರ್ ಇತಿಹಾಸ ಗೊತ್ತಾ?. ಅವರಿಂದ ಹೆಚ್ಚು ನನಗೆ ಗೊತ್ತು. ನಾನು ಅವರ ತತ್ವವನ್ನು ನಂಬಲ್ಲ, ಆ ತತ್ವವನ್ನು ಹುಟ್ಟು ಹಾಕಿದವರನ್ನು ಏಕೆ ನಂಬಬೇಕು?. ನನಗೆ ಬಸವ ತತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಸಾವರ್ಕರ್ ಫೋಟೋ ತೆರವು ವಿಚಾರವಾಗಿ ನಾನು ಸ್ಪೀಕರ್ ಬಳಿ ಈ ವಿಚಾರವಾಗಿ ಮಾತನಾಡಿಲ್ಲ ಎಂದು ಹೇಳಿದರು.