ಆನೇಕಲ್(ಬೆಂಗಳೂರು): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ಆರೋಪಿಗಳಾದ ಚೈತ್ರಾ ಹಾಗೂ ಶ್ರೀಕಾಂತ್ ಇಂದು ಬಿಡುಗಡೆಯಾದರು. ಇದಕ್ಕೂ ಮೊದಲು ಚೈತ್ರಾ ಸೇರಿ ಇಬ್ಬರಿಗೆ ಮೂರನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಇವರು ಜೈಲು ಪಾಲಾಗಿದ್ದರು. ಆರೋಪಿಗಳಾದ ಚೈತ್ರಾ ಹಾಗೂ ಶ್ರೀಕಾಂತ್‌ಗೆ ನ್ಯಾಯಾಲಯ ಎರಡು ದಿನದ ಹಿಂದೆ ಜಾಮೀನು ನೀಡಿತ್ತು. ಆದರೆ, ಷರತ್ತುಗಳನ್ನು ಪೂರೈಸಲು ವಿಳಂಬವಾದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದ ಚೈತ್ರಾ, ತಮ್ಮ ಆಪ್ತರೊಂದಿಗೆ ಕಾರಿನಲ್ಲಿ ತೆರಳಿದ್ದಾರೆ.
ಪ್ರಕರಣ ಹಿನ್ನಲೆ: ಉದ್ಯಮಿ ಗೋವಿಂದ್ ಪೂಜಾರಿ ಎಂಬವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಸೇರಿ ಹಲವರು ಜೈಲು ಸೇರಿದ್ದರು. ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್‌ಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಮೂಲಕ ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಂತಾಗಿದೆ.
ಗೋವಿಂದಬಾಬು ಪೂಜಾರಿ ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಉನ್ನತ ತನಿಖೆಗಾಗಿ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿತ್ತು. ಈ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಿತ್ತು. ಬಳಿಕ ಚೈತ್ರಾ ಸೇರಿದಂತೆ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
Laxmi News 24×7