Breaking News

ತೃತೀಯ ಲಿಂಗಿಗಳು, ಮಾಜಿ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾದ ಶ್ರೀ ಕೃಷ್ಣದೇವರಾಯ ವಿವಿ

Spread the love

ಬಳ್ಳಾರಿ: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತೃತೀಯ ಲಿಂಗಿಗಳಿಗೆ ಹಾಗೂ ಮಾಜಿ ದೇವದಾಸಿಯರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಮಾಜದಲ್ಲಿ ತೃತೀಯ ಲಿಂಗಿಗಳು ಗೌರವದ ಜೀವನ ನಡೆಸಲು ಸರಿಯಾದ ಸೌಕರ್ಯ ಸಿಗುತ್ತಿಲ್ಲ, ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮನಗಂಡು ವಿಶ್ವವಿದ್ಯಾಲಯದ ಆಡಳಿತವರ್ಗ ಮುಂದಿನ ಶೈಕ್ಷಣಿಕ ವರ್ಷದಿಂದ ಅವರಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.

ಈ ಕುರಿತ ಪ್ರಸ್ತಾವನೆಯನ್ನು ಸಿಂಡಿಕೇಟ್ ಮುಂದಿಟ್ಟು ಈಗಾಗಲೇ ಅನುಮೋದನೆ ಕೂಡ ಪಡೆದುಕೊಳ್ಳಲಾಗಿದೆ. ಇನ್ನು ಮುಂದೆ ವಿವಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ಉನ್ನತ ಶಿಕ್ಷಣ ಒದಗಿಸಲಾಗುತ್ತಿದೆ. ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಾನೂನಿನ ಅರಿವಿನ ಕೊರತೆಯಿಂದಾಗಿ ಈಗಲೂ ಈ ಅನಿಷ್ಟ ಪದ್ಧತಿಯಲ್ಲಿ ನರಳುತ್ತಿದ್ದಾರೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಈ ಪಿಡುಗಿನಿಂದ ವಿಮುಖರನ್ನಾಗಿ ಮಾಡಲು ವಿಎಸ್‌ಕೆಯು ಪ್ರಮುಖ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಸುಮಾರು 46 ಸಾವಿರ ಮಾಜಿ ದೇವದಾಸಿಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಅವಳಿ ಜಿಲ್ಲೆಯಲ್ಲೇ 15 ಸಾವಿರ ಮಾಜಿ ದೇವದಾಸಿಯರಿದ್ದು, ಸಾವಿರಕ್ಕೂ ಹೆಚ್ಚು ದೇವದಾಸಿಯರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 3 ಸಾವಿರಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ನೀಡಲು ವಿವಿ ಆಡಳಿತ ವರ್ಗ ಮುಂದಾಗಿದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್‍.ರುದ್ರೇಶ್ ಮಾತನಾಡಿ, “2010ರಲ್ಲಿ ವಿಎಸ್‌ಕೆ ವಿವಿ ಆರಂಭಗೊಡಿದ್ದು, ಒಟ್ಟು 27 ವಿಭಾಗಗಳ ಪೈಕಿ 13 ವಿಭಾಗಗಳನ್ನು ತೆರೆಯಲಾಗಿದೆ. ನಾಲ್ಕು ಸ್ನಾತಕೋತ್ತರ ಕೇಂದ್ರಗಳು ಸೇರಿದಂತೆ ಒಟ್ಟು 2884 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಸಮಾಜದಿಂದ ದೂರ ಉಳಿದವರನ್ನು, ಶಿಕ್ಷಣದಿಂದ ವಂಚಿತರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ನ.8ರಂದು ನಡೆದ ಸಾಮಾನ್ಯ ಸಿಂಡಿಕೇಟ್ ಸಭೆಯಲ್ಲಿ ತೃತೀಯ ಲಿಂಗಿಗಳಿಗೆ ಹಾಗೂ ಮಾಜಿ ದೇವದಾಸಿಯರ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅವರಿಗೆ ಪ್ರವೇಶಾತಿ ಶುಲ್ಕ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ