ಬೆಳಗಾವಿ: ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ವಿಚಾರ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ತಿಳಿದುಕೊಂಡು ಮಾತಾಡ್ತೀನಿ ಎಂದರು. ಈ ಮೂಲಕ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ಗೆ ಆರ್‌ಎಸ್‌ಎಸ್ ವಸ್ತು ಸಂಗ್ರಹಾಲಯದಲ್ಲಿ ಪ್ರವೇಶ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಸತ್ಯಕ್ಕೆ ದೂರವಾದ ಆರೋಪ : ಇದೇ ವೇಳೆ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್, ಆರ್‌ಎಸ್‌ಎಸ್ ನಾಯಕರು ಆ ರೀತಿ ಹೇಳಲು ಸಾಧ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ನಾನೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಬಾರಿ ನೇಮಕಗೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ಆರ್‌ಎಸ್‌ಎಸ್ ಕಚೇರಿಯಲ್ಲಿ ಎಲ್ಲರಿಗೂ ಅವಕಾಶ ಇದೆ. ಬಿಜೆಪಿ ಅಂಬೇಡ್ಕರ್ಗೆ ಸೂಕ್ತ ಗೌರವ ನೀಡಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್ಗೆ ಅಗೌರವ ತೋರಿಸುತ್ತಾ ಬಂತು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗಾಗಿ ಎಸ್ಸಿ ಪಿಟಿಎಸ್ಪಿಯಿಂದ 11,500 ಕೋಟಿ ರೂ. ಹಣ ಬಳಕೆ ಮಾಡಿದೆ ಎಂದು ಆರೋಪಿಸಿದರು.
ಆಡಿಯೋ ವೈರಲ್ ವಿಚಾರ: “ದಲಿತ ಎನ್ನುವ ಕಾರಣಕ್ಕೆ ನಾಗ್ಪುರದಲ್ಲಿರುವ ಕೆ.ಬಿ.ಹೆಡ್ಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂದು ಸ್ಪಷ್ಟಪಡಿಸುವಂತೆ” ಮಾಜಿ ಶಾಸಕರೊಬ್ಬರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಆಡಿಯೋವೊಂದರ ಮೂಲಕ ಕಾರಣ ಕೇಳಿದ್ದಾರೆ. ಗೂಳಿಹಟ್ಟಿ ಶೇಖರ್ ಅವರದ್ದು ಎನ್ನಲಾದ ಈ ಆಡಿಯೋ ಸದ್ದು ಮಾಡುತ್ತಿದೆ.
ಈ ಬಗ್ಗೆ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ಆರ್‌ಎಸ್‌ಎಸ್ ಸರಸಂಘಚಾಲಕರಾಗಿ ದಲಿತರನ್ನು ನೇಮಕ ಮಾಡಲಿ” ಎಂದು ಸವಾಲು ಹಾಕಿದ್ದಾರೆ. “ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್ ಅವರಿಗೆ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೇವಾರ್ ಮ್ಯೂಸಿಯಂಗೆ ಹೋದಾಗ ದಲಿತ ಎಂಬ ಕಾರಣಕ್ಕೆ ಪ್ರವೇಶ ಕೊಟ್ಟಿಲ್ಲ ಎಂದು ಗೂಳಿಹಟ್ಟಿ ಶೇಖರ್ ಆಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಈ ನಿಯಮ ಬಿಜೆಪಿಯ ದಲಿತ ನಾಯಕರಿಗೂ ಅನ್ವಯ ಆಗುತ್ತಾ? ಎಂದು ಕೇಳಿದ್ದಾರೆ. ಹಿಂದುತ್ವದಲ್ಲಿ ಆರ್‌ಎಸ್‌ಎಸ್ ತತ್ವದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ, ಬಡವರಿಗೆ ಜಾಗ ಇಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಖರ್ಗೆ ಟೀಕಿಸಿದ್ದಾರೆ.
Laxmi News 24×7