ಬೆಳಗಾವಿ: ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಬೇಕು.
ಡಾ ಅನ್ನಪೂರ್ಣಮ್ಮನವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕೂಡಲೇ ಅನುಷ್ಠಾನಕ್ಕೆ ತರಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಡಿವಾಳ ಸಮಾಜ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಉತ್ತರಕರ್ನಾಟಕ ಮಡಿವಾಳರ ಸಂಘದ ಬಾಗಲಕೋಟೆ ಪದಾಧಿಕಾರಿಗಳು ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿದರು. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು 2008ರಲ್ಲಿ ಅಂದಿನ ಸರ್ಕಾರಕ್ಕೆ ಡಾ ಅನ್ನಪೂರ್ಣಮ್ಮನವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ 16 ವರ್ಷ ಕಳೆದರೂ ಅನುಷ್ಠಾನಗೊಳ್ಳದಿರುವುದು ದುರ್ದೈವದ ಸಂಗತಿ.
ಮಡಿವಾಳರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯಿಂದ ವಂಚಿತರಾಗಿದ್ದು, ಕೂಡಲೇ ಆ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮೀಸಲಾತಿ ಕಲ್ಪಿಸಬೇಕು. ಅದೇ ರೀತಿ 12ನೇ ಶತಮಾನದ ನಿಜ ಶರಣ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ ಮತ್ತು ಐಕ್ಯ ಸ್ಥಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.