ಚಿಕ್ಕೋಡಿ: ಕ್ರೇನ್ ಸೀಲಿಂಗ್ ತುಂಡಾಗಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಇಂದು ನಡೆದಿದೆ. ಮಧ್ಯಪ್ರದೇಶದ ಸಂತೋಷ ಮುಣ್ಣಾ ವಿಶ್ವಕರ್ಮ (28) ಮೃತಪಟ್ಟಿದ್ದಾರೆ.
ಜಂಬಗಿ ಗ್ರಾಮದ ಶಾವಂತ ಪಾಟೀಲ್ ಎಂಬ ರೈತನ ಜಮೀನಿನಲ್ಲಿ ಮಧ್ಯಪ್ರದೇಶದ ಐವರು ಕಾರ್ಮಿಕರು ಬಾವಿ ಕೊರೆಯುವ ಕೆಲಸ ಮಾಡುತ್ತಿದ್ದರು. ಇಬ್ಬರು ಬಾವಿಗಿಳಿಯುತ್ತಿದ್ದ ಸಂದರ್ಭದಲ್ಲಿ ಕ್ರೇನ್ ಸೀಲಿಂಗ್ ತುಂಡಾಗಿದೆ. ಅಂದಾಜು ನೂರು ಅಡಿ ಆಳದ ಬಾವಿಗೆ ಸೀಲಿಂಗ್ ಬೀಳುತ್ತಿದ್ದಂತೆ ಸಂತೋಷ್ ಸ್ಥಳದಲ್ಲೇ ಮೃತಪಟ್ಟರು. ಪ್ರಮೋದ್ ಮಂಡವಿ ಎಂಬವರು ಗಂಭೀರವಾಗಿ ಗಾಯಗೊಂಡರು. ಗಾಯಾಳುವನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರತೆಗೆದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.