ಬೆಳಗಾವಿ/ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 1,700ಕ್ಕೂ ಹೆಚ್ಚು ವಾಹನಗಳನ್ನು ಸ್ಕ್ರಾಂಪ್‌ಗೊಳಿಸಲು (ನಿರುಪಯುಕ್ತ) ತೀರ್ಮಾನಿಸಲಾಗಿದ್ದು, ಹಂತಹಂತವಾಗಿ ನಿರುಪಯುಕ್ತಗೊಳಿಸುವುದರ ಜೊತೆಗೆ 100 ಕೋಟಿ ರೂ.ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಇಂದು ಹೇಳಿದರು.
ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಶ್ರೀನಿವಾಸ ಜಿ.ಎಚ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗ್ನಿಶಾಮಕ ಠಾಣೆ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸುವ ಹಾಗೂ ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ಅನುಮತಿ ನೀಡುವ ಸಂಬಂಧ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಅವಧಿ ಮೀರಿದ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನು ನಿರುಪಯುಕ್ತಗೊಳಿಸಿದಲ್ಲಿ ಇಲಾಖೆಯ ಮೂಲ ಚಟುವಟಿಕೆಗಳಿಗೆ ತೊಂದರೆಯಾಗುವುದರಿಂದ ವಾಹನಗಳ ನೋಂದಣಿ ಪತ್ರವನ್ನು ನವೀಕರಿಸಲು ಕೇಂದ್ರ ಸರಕಾರದ ಅನುಮತಿ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.