ಬೆಳಗಾವಿ: ನರೇಗಾ ಯೋಜನೆ ಬರಗಾಲದ ಸಂಕಷ್ಟದ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ನೆರವಾಗುತ್ತದೆ.
ಆದರೆ ಇದೇ ಈಗ ರೈತರಿಗೆ ಸಂಕಷ್ಟ ತಂದೊಡ್ಡಿದ್ದು, ಬೆಳೆದು ನಿಂತಿರುವ ಭತ್ತದ ಕಟಾವಿಗೆ ಕೂಲಿ ಕಾರ್ಮಿಕರು ಸಿಗದೇ ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಅನ್ನದಾತರು ಪರದಾಡುತ್ತಿದ್ದಾರೆ. ಸುಗ್ಗಿ ಕಾಲದಲ್ಲಿ ಕೂಲಿ ಕೊಡಬೇಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹೌದು, ಮೊದಲೇ ಬರಗಾಲದಿಂದ ತತ್ತರಿಸಿ ಹೋಗಿದ್ದ ಕಡೋಲಿ ಗ್ರಾಮದ ರೈತರು ಕಷ್ಟಪಟ್ಟು ಭತ್ತ ಬೆಳೆದಿದ್ದರು. ಈಗ ಅದು ಕಟಾವಿಗೆ ಬಂದಿದೆ. ಆದರೆ, ಕೂಲಿ ಕಾರ್ಮಿಕರು ಸಿಗದೇ ರೈತರು ಕಂಗಾಲಾಗಿದ್ದಾರೆ. ಕೂಲಿಕಾರ್ಮಿಕರು ಸಿಗದೇ ಇರುವುದಕ್ಕೆ ಪ್ರಮುಖ ಕಾರಣ ನರೇಗಾ ಯೋಜನೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ದಿನಕ್ಕೆ 316 ರೂ. ಕೂಲಿ ಸಿಗುತ್ತದೆ. ರೈತರ ಹೊಲ-ಗದ್ದೆ ಕೆಲಸಕ್ಕೆ ಹೋದರೆ 200 ರೂ. ಸಿಗುತ್ತದೆ. ಹಾಗಾಗಿ ಬಹಳಷ್ಟು ಜನ ಹೆಚ್ಚಿನ ಹಣ ಸಿಗುವ ನರೇಗಾ ಕೂಲಿಯತ್ತ ಮುಖ ಮಾಡುತ್ತಿದ್ದಾರೆ.
ಈ ವರ್ಷ ಬರಗಾಲವಿದ್ದರೂ ಕಡೋಲಿ ಗ್ರಾಮದಲ್ಲಿ ಸುಮಾರು 1200 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಬಹುತೇಕ ಎಲ್ಲಾ ರೈತರ ಭತ್ತ ಕಟಾವಿಗೆ ಬಂದಿದ್ದು, ಯಾವೊಬ್ಬ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಎಲ್ಲರೂ ನರೇಗಾ ಕೆಲಸಕ್ಕೆ ಹೋಗುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಒಂದು ವಾರದಲ್ಲಿ ಕಟಾವು ಮಾಡದಿದ್ದರೆ ಭತ್ತದ ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಹಾಗಾಗಿ, ಗ್ರಾಮದ ರೈತರು ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಭತ್ತದ ಕಟಾವು ಮುಗಿಯೋವರೆಗೂ ನರೇಗಾ ಕೆಲಸ ಬಂದ್ ಮಾಡುವಂತೆ ಧ್ವನಿ ಎತ್ತಿದರು. ರೈತರ ಸಂಕಷ್ಟ ಅರಿತ ಪಂಚಾಯತಿ ಅಧ್ಯಕ್ಷರು, ಪಿಡಿಒ ಅವರು ಈ ಬಗ್ಗೆ ಠರಾವ್ ಕೂಡ ಪಾಸ್ ಮಾಡಿ ರೈತರ ಬೆನ್ನಿಗೆ ನಿಂತರು.