ಬೆಳಗಾವಿ: ನವೆಂಬರ್ 23ರಂದು ಬೆಳಗಾವಿಯ ಭಾಗ್ಯನಗರದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಅನುಮತಿ ಸಂಬಂಧ ಬಿಜೆಪಿ ನಗರ ಸೇವಕ ಹಾಗೂ ಸ್ಥಳೀಯರ ನಡುವಿನ ಗಲಾಟೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ನಿನ್ನೆ ತಡರಾತ್ರಿ ನಗರ ಸೇವಕ ಅಭಿಜಿತ್ ಜವಳಕರ್ರನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಜಿತ್ ಜವಳಕರ್ ಅವರನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ನಿನ್ನೆಯಷ್ಟೇ ಪಾಲಿಕೆ ಸದಸ್ಯ ಅಭಿಜಿತ್ ಬಂಧಿಸುವಂತೆ ಎಂಇಎಸ್ ಕಾರ್ಯಕರ್ತರು ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬೆನ್ನಲ್ಲೇ ರಾತ್ರೋರಾತ್ರಿ ಬಂಧಿಸಲಾಗಿದೆ. ಬಂಧನ ಖಂಡಿಸಿ ಬಿಮ್ಸ್ ಆಸ್ಪತ್ರೆ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.