Breaking News

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ

Spread the love

ವಿಜಯಪುರ: “ಜಿಲ್ಲೆಯ ನೂತನ ತಾಲೂಕು ತಿಕೋಟಾದ ಕನಮಡಿಯಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ” ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ತಿಕೋಟಾ ತಾಲೂಕಿನಲ್ಲಿ ಅತೀ ಹೆಚ್ಚು ಪಂಚಮಸಾಲಿ ಸಮಾಜದವರು ಇರುವ ಗ್ರಾಮವೆಂದರೆ ಅದು ಕನಮಡಿ ಗ್ರಾಮ, ಇಲ್ಲಿಯೇ ಪಂಚಮಸಾಲಿ ಸಮಾಜದ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ ಮಾಡಲಿದ್ದೇವೆ” ಎಂದರು.

“ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವ ಮಾಡಬೇಕೆಂದು ಸಮಾಜದ ಬಾಂಧವರು ಆಲೋಚನೆ ಮಾಡಿರುವುದರಿಂದ ನವೆಂಬರ್​ 21ರಂದು ಬೆಳಗ್ಗೆ 11 ಗಂಟೆಗೆ ಚೆನ್ನಮ್ಮನ ಭಾವಚಿತ್ರದ ಭವ್ಯವಾದ ರ್‍ಯಾಲಿ ಮೂಲಕ, ಕನಮಡಿ ಮತ್ತು ವಿಜಯಪುರ ನೂತನ ರಾಜ್ಯ ಹೆದ್ದಾರಿಯಲ್ಲಿ 30 ನಿಮಿಷ ರಸ್ತೆ ಬಂದ್​ ಮಾಡುತ್ತೇವೆ. ಈ ವೇಳೆ ಇಷ್ಟಲಿಂಗ ಪೂಜೆ ಜೊತೆ ಹೋರಾಟ ಮಾಡಿ, ಪಕ್ಕದಲ್ಲಿರುವ ಧರಿದೇವರ ಪ್ರೌಢಶಾಲೆ ಆವರಣದಲ್ಲಿ ಬೃಹತ್​ ಸಮಾವೇಶವನ್ನು ಮಾಡಲಾಗುತ್ತದೆ. ಈ ಮೂಲಕ ತಿಕೋಟಾದಲ್ಲಿಯೂ ಸಮಾಜ ಜಾಗೃತಿಗೊಳಿಸುವ ಕೆಲಸ ಮಾಡಬೇಕೆಂದು ಸಮಾಜದ ಮುಖಂಡರೆಲ್ಲಾ ಸೇರಿ ಆಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ” ಎಂದು ತಿಳಿಸಿದರು.

“ಇದಕ್ಕೆ ಪೂರಕವಾಗಿ ತಿಕೋಟಾ ತಾಲೂಕಿನ ಸುಮಾರು 42 ಗ್ರಾಮಗಳಚಲ್ಲಿ ನಿತ್ಯವೂ ಬಹಿರಂಗ ಸಭೆಗಳನ್ನು ಮಾಡಲಾಗುತ್ತಿದೆ. ಗ್ರಾಮಗಳಿಗೆ ಸ್ವತಃ ನಾನು ಮತ್ತು ಸಮಾಜದ ಮುಖಂಡರು ತೆರಳಿ ಮೀಸಲಾತಿ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೊರುತ್ತಿದೆ ಎಂದು ಸಮಾಜದಲ್ಲಿ ಅಸಮಾಧಾನ ಇದೆ. ಈ ಕಾರಣಕ್ಕೆ ಕನಮಡಿಯಲ್ಲಿ ನಡೆಯುವ ಬೃಹತ್​ ಸಮಾವೇಶದಲ್ಲಿ ಸರ್ಕಾರಕ್ಕೆ ಖಡಕ್​ ಸಂದೇಶ ರವಾನಿಸಬೇಕು ಎಂದು ನಿರ್ಧಾರ ಮಾಡಲಾಗಿದೆ” ಎಂದು ಹೇಳಿದರು.

“ಬರುವ ಚಲಿಗಾಲದ ಅಧಿವೇಶನದ ಒಳಗಾಗಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸುವ ಮೂಲಕ ಈ ಸಮಾಜದ ಮೀಸಲಾತಿ ಹೋರಾಟಕ್ಕೆ ಭರವಸೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕುರುಬ ಮತ್ತು ಕುಂಚಿಟಿಗ ಸಮಾಜವನ್ನು ಎಸ್​ಟಿಗೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಪಂಚಮಸಾಲಿಗಳು ಮನೆ – ಮಠ ಬಿಟ್ಟು ಮೂರು ವರ್ಷಗಳಿಂದ ನಿಸ್ವಾರ್ಥ, ಪ್ರಾಮಾಣಿಕವಾದ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಪರವಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ 18 ಜಿಲ್ಲೆಗಳಿಂದ ಸರ್ವೆ ರಿರ್ಪೋಟ್​ ಬಂದಿದೆ. ಇಷ್ಟೆಲ್ಲಾ ಇದ್ದರೂ ಮುಖ್ಯಮಂತ್ರಿಗಳು ನಿರ್ಲಕ್ಷ್ಯ ಮಾಡದೆ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲು ಮುನ್ನುಡಿ ಬರೆಯಬೇಕು ಎಂದು ಒತ್ತಾಯಿಸುತ್ತೇನೆ” ಎಂದು ತಿಳಿಸಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ