ಬೆಳಗಾವಿ : ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜಯಂತಿ ಆಚರಣೆಗೆ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಮತ್ತು ಚೆನ್ನಮ್ಮನ ಜನ್ಮದಿನಾಂಕ ಗೊಂದಲಕ್ಕೆ ಇತಿಶ್ರೀ ಹಾಡದಿರುವುದು ಈ ಭಾಗದ ಸಾಹಿತಿಗಳು, ಸ್ವಾಮೀಜಿಗಳು ಹಾಗೂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
1778 ನವೆಂಬರ್ 14 ಕನ್ನಡ ನಾಡಿನಲ್ಲಿ ಕೆಚ್ಚೆದೆಯ ಕಿತ್ತೂರು ರಾಣಿ ಚೆನ್ನಮ್ಮ ಜನಿಸಿದ ದಿನ. ಚೆನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಹತ್ತಾರು ಸಾಹಿತಿಗಳು, ಸಂಶೋಧಕರು ಸರ್ಕಾರಕ್ಕೆ ಸೂಕ್ತ ದಾಖಲೆ, ಮಾಹಿತಿ ಒದಗಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕೃತ ದಿನಾಂಕ ಘೋಷಿಸಿ, ಚೆನ್ನಮ್ಮಾಜಿ ಜಯಂತಿ ಸರ್ಕಾರದಿಂದಲೇ ಆಚರಿಸಲು ಯಾವುದೇ ಸರ್ಕಾರ ಮುಂದಾಗಿಲ್ಲ.
ಸಾಹಿತಿ ಯ.ರು. ಪಾಟೀಲ ಏನಂತಾರೆ..? : ಯಾವುದೇ ಮಹಾತ್ಮರನ್ನು ನೆನಪಿಸಿಕೊಳ್ಳುವುದು ಜನ್ಮದಿನ ಮತ್ತು ಅವರ ಶೌರ್ಯದ ದಿನದಂದು. ಹಾಗಾಗಿ, ಕಿತ್ತೂರು ಎಂಬ ಚಿಕ್ಕ ಸಂಸ್ಥಾನವು ಬ್ರಿಟಿಷರಂತ ದೊಡ್ಡ ಸಂಸ್ಥಾನದ ವಿರುದ್ಧ ಹೋರಾಡುವ ಮೂಲಕ ತಮ್ಮ ತಾಕತ್ತು ತೋರಿಸಿಕೊಟ್ಟಿದ್ದ ರಾಣಿ ಚೆನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಗೊಂದಲ ಮೂಡಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂದು ಹಿರಿಯ ಸಾಹಿತಿ, ಸಂಶೋಧಕ ಯ.ರು. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.