ಬೆಂಗಳೂರು : ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಸಿ ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವರ್ಗಾವಣೆ ಮಾಡಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿ ಸುಮಲತಾ ಅವರನ್ನು ಈ ಹಿಂದೆ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಮನವಿ ಮಾಡಿ ತೆಲಂಗಾಣಕ್ಕೆ ನೆರೆ ರಾಜ್ಯಗಳಾಗಿರುವ ಆಂಧ್ರ ಪ್ರದೇಶ ಅಥವಾ ಕರ್ನಾಟಕಕ್ಕೆ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಪುರಸ್ಕರಿಸಿದ್ದ ಕೊಲಿಜಿಯಂ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡುವುದಕ್ಕೆ ಶಿಫಾರಸ್ಸು ಮಾಡಿತ್ತು.
ಸುಮಲತಾ ಅವರು ಸ್ನಾತಕೋತ್ತರ ಪದವಿಯಲ್ಲಿ ಸಂವಿಧಾನಾತ್ಮಕ ಕಾನೂನು ವಿಚಾರದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಬಳಿಕ ಸುಮಾರು 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದಾದ ಬಳಿಕ ಕರ್ನೂಲ್ ಮತ್ತು ಗುಂಟೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಹೈದರಾಬಾದ್‌ನ ನ್ಯಾಯಾಂಗ ಅಕಾಡೆಮಿಯ ನಿರ್ದೇಶನಕಾರರು, ಹೈದರಾಬಾದ್ ಸಿಟಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದರು. 2021ರಲ್ಲಿ ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಇದೀಗ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.
Laxmi News 24×7