ಧಾರವಾಡ : ದೀಪಾವಳಿ ನಿಮಿತ್ತ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ನರೇಂದ್ರ ಗ್ರಾಮದಲ್ಲಿ ಜೂಜಾಟ ನಡೆಯುವ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ನಾಗರಾಜ್ ಪಾಟೀಲ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಜೂಜುಕೋರರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ 10ಕ್ಕೂ ಹೆಚ್ಚು ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಪ್ರತಿಕ್ರಿಯಿಸಿದ್ದು, ನಿನ್ನೆ ತಡರಾತ್ರಿ 1 ಗಂಟೆಗೆ ಅಧಿಕಾರಿಗಳು ಗಸ್ತಿನಲ್ಲಿದ್ದರು. ನರೇಂದ್ರ ಶಾಲೆ ಬಳಿಯಲ್ಲಿ ಜೂಜಾಟ ನಡೆದ ಮಾಹಿತಿ ಬಂದಿತ್ತು. ಆಗ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದರು. ಆಗ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ಕೆಲವರು ದಾಳಿ ಮಾಡಿದ್ದಾರೆ. ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದಲ್ಲಿ 8 ಜನರ ಬಂಧನ ಆಗಿದೆ. ಉಳಿದವರ ಪತ್ತೆ ಕಾರ್ಯ ನಡೆದಿದೆ. ಹತ್ತು ಜನ ಶಂಕಿತರಿದ್ದಾರೆ. ಕಾನ್ಸ್ಟೇಬಲ್ ನಾಗರಾಜ್ ಎಂಬುವವರ ತಲೆಗೆ ಪೆಟ್ಟಾಗಿದೆ. ಪಿಎಸ್‌ಐ ಬಸನಗೌಡರಿಗೆ ಕೈ ಮತ್ತು ಕುತ್ತಿಗೆಗೆ ಗಾಯವಾಗಿದೆ. ಇಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ 3-4 ದಿನದಲ್ಲಿ 27 ಜೂಜಾಟದ ಪ್ರಕರಣ ದಾಖಲಾಗಿವೆ. 236 ಜನರನ್ನು ಬಂಧಿಸಲಾಗಿದೆ. 3.38 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.