ವಿನಯ್ ರಾಜ್ಕುಮಾರ್ ನಟನೆಯ ‘ಗ್ರಾಮಾಯಣ’ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋವೊಂದನ್ನು ರಿಲೀಸ್ ಮಾಡಿದೆ.
ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಡಮ್ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್ಕುಮಾರ್. ಸದ್ಯ ‘ಪೆಪೆ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್ ರಾಜ್ಕುಮಾರ್ ಅವರ ತಾತ ಹುಟ್ಟಿದ ಮನೆ ಅಂದ್ರೆ ಡಾ.ರಾಜ್ಕುಮಾರ್ ಅವರ ಮನೆ ಗಾಜನೂರಿನಲ್ಲಿ ಬಹಳ ವಿಶೇಷವಾಗಿ ಈ ವರ್ಷ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದ ವಿಡಿಯೋವನ್ನು ‘ಗ್ರಾಮಾಯಣ’ ಚಿತ್ರತಂಡ ಹಂಚಿಕೊಂಡಿದೆ.
ಹಳ್ಳಿಗಳಲ್ಲಿ ಹಳೆ ಕಾಲದ ಸಂಪ್ರದಾಯ ಹಾಗೂ ಸಂಸ್ಕೃತಿ ಮಾಯಾವಾಗುತ್ತಿರುವ ಕಾಲದಲ್ಲಿ ಹಳ್ಳಿ ಎಂದರೆ ಏನು? ಹಳ್ಳಿ ಆಚಾರ ವಿಚಾರಗಳು ಹೇಗಿರುತ್ತವೆ? ದೀಪಾವಳಿಯ ಸಂಭ್ರಮ ಹೇಗಿದೆ? ಎಂಬುದನ್ನು ಸದ್ಯ ರಿಲೀಸ್ ಆಗಿರುವ ವಿಡಿಯೋದಲ್ಲಿ ತೋರಿಸಲಾಗಿದೆ. ವಿಶೇಷ ಎಂದರೆ ಡಾ.ರಾಜ್ಕುಮಾರ್ ಹುಟ್ಟಿ ಬೆಳೆದ ಹೆಂಚಿನ ಮನೆಯ ಅಂದ ಚೆಂದ ನೋಡುವುದೇ ಖುಷಿ ಎನಿಸುತ್ತದೆ.
‘ಗ್ರಾಮಾಯಣ’ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರವಿದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.