Breaking News

ಎನ್​ಡಿಆರ್​ಎಫ್​, ಎಸ್​​ಡಿಆರ್​ಎಫ್​ ನಿಯಮಗಳ ಪ್ರಕಾರ ರೈತರ ಖಾತೆಗೆ ಹಣ ಹಾಕಿ: ಹಾವೇರಿ ರೈತರ ಆಗ್ರಹ

Spread the love

ಹಾವೇರಿ: ಜಿಲ್ಲೆಯು ಹಿಂದೆಂದೂ ಕಾಣರಿಯದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿವೆ ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, “ಹಾವೇರಿ ಕೃಷಿ ಪ್ರಧಾನ ಜಿಲ್ಲೆ, ಆದ್ರೆ ಸತತ ಮೂರು ವರ್ಷ ಅತಿವೃಷ್ಟಿ ಇತ್ತು. ಈ ವರ್ಷ ಬರಗಾಲ ಉಂಟಾಗಿದೆ, ಎರಡ್ಮೂರು ಸಲ ಬಿತ್ತನೆ ಮಾಡಿದರೂ ಸಹ ಫಸಲು ಬಂದಿಲ್ಲ. ಸರ್ಕಾರ ಬರಗಾಲ ಎಂದು ಘೋಷಣೆ ಮಾಡಿದೆ. ತಾಲೂಕುಗಳನ್ನು ಹೋರಾಟ ಮಾಡಿ ಬರಬೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಯಿತು. ಬರಗಾಲ ಪರಿಸ್ಥಿತಿಯ ಜವಾಬ್ದಾರಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ನಿಯಮಗಳ ಪ್ರಕಾರ ಪರಿಹಾರದ ಹಣವನ್ನು ತಕ್ಷಣ ರೈತರ ಖಾತೆಗೆ ಹಾಕಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಇದೇ ನ.28ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸ ಮಾಡುತ್ತೇವೆ” ಎಂದರು.​​

ರೈತ ಸಂಘಟನೆ ಸಂಚಾಲಕ ರಾಮಣ್ಣ ಕೆಂಚಳ್ಳೇರ್ ಮಾತನಾಡಿ, “ಹಾವೇರಿ ಜಿಲ್ಲೆಯಲ್ಲಿ 100ಕ್ಕೆ 99 ರಷ್ಟು ರೈತರೇ ಇದ್ದೇವೆ. ಬರಗಾಲದಿಂದ ಬೆಳೆಗಳೆಲ್ಲವು ಒಣಗಿಹೋಗಿವೆ. ಈಗ ಹಿಂಗಾರು ಮಳೆ ಬರುತ್ತಿದ್ದು, ಬಿತ್ತನೆ ಮಾಡಲು ಬೀಜ, ಗೊಬ್ಬರ ಖರೀದಿ ಮಾಡಲು ರೈತರ ಬಳಿ ಹಣ ಇಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕಿತ್ತು. ಬೆಳೆ ವಿಮೆಗೆ ಮಧ್ಯಂತರ ಪರಿಹಾರವಾಗಿ 127 ಕೋಟಿ ಕೊಟ್ಟಿರುವುದನ್ನು ಬಿಟ್ಟರೇ, ಬೆಳೆ ಪರಿಹಾರದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರ ಸಮೀಕ್ಷೆ ಮಾಡಿ ವರದಿಯನ್ನು ಒಪ್ಪಿಸಿದೆ. ಕೇಂದ್ರದವರು ಒಂದು ವರದಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಈವರೆಗೆ ಪರಿಹಾರ ನೀಡಿಲ್ಲ, ಇಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿದೆ” ಎಂದಿದ್ದಾರೆ.

“ಇಡೀ ರಾಜ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿರುವುದು ಹಾವೇರಿಯಲ್ಲಿ. ರೈತರ ಬದುಕಿನ ಜೊತೆ ರಾಜಕಾರಣ ಮಾಡುವುದು ಬೇಡ. ಸರ್ಕಾರಗಳು ತಕ್ಷಣ ಬರ ಪರಿಹಾರ ಘೋಷಣೆ ಮಾಡಲೇಬೇಕು. ಎರಡು ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದರ ಬಗ್ಗೆ ಗಮನ ಹರಿಸಿವೆ. ಮುಂದೆ ಜಿಲ್ಲಾಧಿಕಾರಿ ಮತ್ತು ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡಸುತ್ತೇವೆ” ಎಂದು ಎಚ್ಚರಿಕೆ ರವಾನಿಸಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ