Breaking News

ಬರ ಪರಿಹಾರದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ: ಹೆಚ್​ ಕೆ ಪಾಟೀಲ್

Spread the love

ಬೆಂಗಳೂರು: ಬರ ಪರಿಹಾರಕ್ಕೆ ಕೇಂದ್ರದಿಂದ ಸ್ಪಂದಿಸದೇ ಇರುವ ಬಗ್ಗೆ ಸಚಿವ ಸಂಪುಟದಲ್ಲಿ ಕಳವಳ ವ್ಯಕ್ತವಾಗಿದ್ದು, ಸಚಿವರು ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ತೆರಳಿ ಬರ ಪರಿಸ್ಥಿತಿ, ನಿರ್ವಹಣೆ ಬಗ್ಗೆ ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಇಂದಿನವರೆಗೆ ಕೇಂದ್ರ ಸರ್ಕಾರದಿಂದ ನಯಾ ಪೈಸೆ ಬರ ಪರಿಹಾರ ಬಂದಿಲ್ಲ. ಸಂಪುಟ ಸಭೆಯಲ್ಲಿ ಬರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ನರೇಗಾ ದಡಿ ನೂರು ದಿನ ಕೆಲಸ ಮುಗಿಸಿದ ಕುಟುಂಬ ಬಹಳಷ್ಟು ಇದೆ. ಮಾನವ ದಿನಗಳನ್ನು 150 ಏರಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಮಾನವ ದಿನವನ್ನು 150ಕ್ಕೆ ಏರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಬರ ನಿರ್ವಹಣೆ ಹಾಗೂ ಮಾನವ ದಿನ ವೃದ್ಧಿಸುವ ಸಂಬಂಧ ಕೇಂದ್ರಕ್ಕೆ ಮನವಿ ಕೊಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂಗೆ ಪ್ರಧಾನಿ ಭೇಟಿಗೆ ಸಮಯ ನೀಡಿಲ್ಲ. ಕಂದಾಯ ಸಚಿವರಿಗೆ ಸಮಯಾವಕಾಶ ನೀಡಿಲ್ಲ. ಕೇಂದ್ರದ ಬರ ಅಧ್ಯಯನ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತಮ್ಮ ವರದಿ ನೀಡಿದ್ದಾರೆ.

ಆದರೆ, ಇಂದಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಬರ ಪರಿಹಾರ ಕೊಟ್ಟಿಲ್ಲ. ಇದಕ್ಕೆ ತೀವ್ರ ಕಳವಳ ವ್ಯಕ್ತವಾಯಿತು. ರಾಜ್ಯಕ್ಕೆ ಅನ್ಯಾಯವಾಗದಂತೆ ಕೇಂದ್ರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಮಲತಾಯಿ ಧೋರಣೆಗೆ ತೀವ್ರ ತರದ ಅಭಿಪ್ರಾಯ ವ್ಯಕ್ತವಾಯಿತು. ಈಗಾಗಲೇ ಸುಮಾರು 790 ಕೋಟಿ ಡಿಸಿಗಳ ಪಿಡಿ ಖಾತೆಯಲ್ಲಿ ಇದೆ. ಮೇವು, ಬರ ನಿರ್ವಹಣೆಗೆ ಯಾವುದೇ ಅಡ್ಡಿ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಸಚಿವರು ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ತೆರಳಿ ತಿಂಗಳೊಳಗೆ ಪರಿಶೀಲನೆ ನಡೆಸುವಂತೆ ಸಿಎಂ ಸೂಚಿಸಿದರು. ರೈತರ ಬೆಳೆ ನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲು ಕಾರ್ಯಕ್ರಮ ರೂಪಿಸಬೇಕು. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಡಿ. 4ರಿಂದ ಬೆಳಗಾವಿ ಅಧಿವೇಶನ: ಡಿ. 4ರಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ಕಲಾಪ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು. ಡಿ. 4ರಿಂದ ಡಿ. 15ರ ವರೆಗೆ ಅಧಿವೇಶನ ನಡೆಯಲಿದೆ ಎಂದರು.

ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರ ಸಿಎಂಗೆ: ಪ್ರಸಕ್ತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರ ಕಾಲಾವಧಿ ಈ ತಿಂಗಳು ಕೊನೆಯಾಗಲಿದೆ. ಹೊಸ ಮುಖ್ಯ ಕಾರ್ಯದರ್ಶಿ ಆಯ್ಕೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಸಂಪುಟ ಸಭೆಯಲ್ಲಿ ಜೇಷ್ಠ ಐಎಎಸ್ ಅಧಿಕಾರಿಗಳ ಹೆಸರುಗಳ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿಎಂಗೆ ಅಧಿಕಾರ ನೀಡಲಾಯಿತು ಎಂದು ಸಚಿವರು ತಿಳಿಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ