ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ತಮ್ಮ ವರ್ಗಾವಣೆ ಕುರಿತಂತೆ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ವರ್ಗಾವಣೆ ಹಾಗೂ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
”ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಅಧಿಕೃತ ದಾಖಲಾತಿ ತೋರಿಸಲಿ. ಒಂದೊಮ್ಮೆ ತಪ್ಪು ಎಸಗಿರುವುದು ಸಾಬೀತಾದರೆ ಹುದ್ದೆಯನ್ನೇ ತೊರೆಯುತ್ತೇನೆ ಎಂದು ಸವಾಲು ಕೂಡಾ ಹಾಕಿದ್ದಾರೆ. ಈ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿ ಅವರನ್ನ ಭೇಟಿಯಾಗಿ ಮಾತನಾಡುತ್ತೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡಗಳು ವಿಭಾಗ) ಆದೇಶಿಸಿದ್ದರು. ಸರ್ಕಾರದ ಈ ಆದೇಶ ಹೊರ ಬೀಳುತ್ತಿದ್ದಂತೆ ಬೆನ್ನಲ್ಲೇ ಪರ-ವಿರೋಧ ಬಗ್ಗೆ ಚರ್ಚೆಯಾಗುತ್ತಿದೆ.