ಹಾವೇರಿ: ಸೋಮವಾರ ಸಂಜೆ ಹಾವೇರಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರತೆ ಪಡೆಯಿತು. ಸುಮಾರು ಗಂಟೆಗೂ ಅಧಿಕ ಕಾಲ ಸುರಿದ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಮಳೆಯ ರಭಸಕ್ಕೆ ಚರಂಡಿಗಳೆಲ್ಲ ತುಂಬಿ ಚರಂಡಿಯ ನೀರು ತ್ಯಾಜ್ಯ ರಸ್ತೆಗಳ ಮೇಲೆ ಬಂದು ನಿಂತಿತು. ರೈಲು ನಿಲ್ದಾಣದ ಬಳಿ ಇರುವ ಅಂಡರ್ ಬ್ರಿಡ್ಜ್‌ನಲ್ಲಿ ಮಳೆ ನೀರು ನಿಂತು ಕೆಲಕಾಲ ರಸ್ತೆ ಸಂಚಾರ ಸಹ ಸ್ಥಗಿತವಾಗಿತ್ತು.
ವಾಹನ ಸವಾರರು ಮೇಲ್ಸೇತುವೆ ಮೂಲಕ ಸಂಚರಿಸಿದರು. ಜುಲೈನಲ್ಲಿ ಸುರಿದ ಮಳೆಯ ನಂತ ನವಂಬರ್ ತಿಂಗಳಲ್ಲಿ ಅದು ಸೋಮವಾರ ಅತ್ಯಧಿಕ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಆರಂಭವಾದ ಮಳೆ ನಂತರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕಳೆದ ಕೆಲ ತಿಂಗಳು ಮಳೆಯಿಲ್ಲದೇ ಕಂಗೆಟ್ಟಿದ್ದ ರೈತರಿಗೆ ಮಳೆರಾಯನ ಆರ್ಭಟ ಸಂತಸ ನೀಡಿತು. ಈ ಮಧ್ಯೆ ಹಿಂಗಾರು ಬಿತ್ತನೆಗೆ ಉತ್ತಮ ಮಳೆಯಾಗಿದೆ ಎಂದು ರೈತರು ಅಭಿಪ್ರಾಯಪಟ್ಟರು. ಇದೇ ವೇಳೆ, ಮುಂಗಾರು ಮಳೆಯಲ್ಲಿ ಅಲ್ಪಸ್ವಲ್ಪ ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಗಳ ಫಸಲಿಗೆ ಸೋಮವಾರದ ಮಳೆ ಹಾನಿಯನ್ನುಂಟು ಮಾಡಿದೆ.
ದಾವಣಗೆರೆಯಲ್ಲಿ ಮಳೆಗೆ ಅರ್ಧ ಭಾಗ ಮುಳುಗಿದ ಕಾರುಗಳು, ತೇಲಾಡಿದ ಬೈಕ್ಗಳು: ಮಳೆ ಇಲ್ಲದೇ ಬಿಸಿಲಿನಿಂದ ರೋಸಿಹೋಗಿದ್ದ ಜನರಿಗೆ ಇಂದು ಸಂಜೆ ಮಳೆರಾಯರ ತಂಪೆರೆದಿದ್ದಾನೆ. ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂಜೆ ಶುರುವಾದ ಧಾರಾಕಾರ ಮಳೆಗೆ ಚನ್ನಗಿರಿ ಪಟ್ಟಣದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.
ಪಟ್ಟಣದ ರಸ್ತೆಗಳು ನೀರಿನಿಂದ ತುಂಬಿದ್ದು, ವಾಹನ ಸವಾರರಿಗೆ ಕಿರಿಕಿರಿ ಆಯಿತು. ಮಳೆ ಇಲ್ಲದೇ ಕಂಗೆಟ್ಟಿದ್ದ ಚನ್ನಗಿರಿಗೆ ವರುಣ ತಂಪರೆದಿದ್ದರಿಂದ ಕೆಲವರು ಸಂತಸ ವ್ಯಕ್ತಪಡಿಸಿದರೆ, ಚನ್ನಗಿರಿ ಅಡಕೆ ಬೆಳೆಗಾರರು ಹಾಗು ರೈತರು ಮಾತ್ರ ಸರಿಯಾದ ಸಮಯಕ್ಕೆ ಮಳೆ ಬಾರದ್ದಕ್ಕೆ ಮಳೆಗೆ ಹಿಡಿಶಾಪ ಹಾಕಿದರು.