ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮರಳು ಸಮಸ್ಯೆ ಬಗ್ಗೆ ಮಾಡಿರುವ ಆರೋಪಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ಶಾಸಕರಾದ ವೇದವ್ಯಾಸ್ ಕಾಮತ್ ಅವರೇ, ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿರುವುದಲ್ಲ. ಕಳೆದ 4 ವರ್ಷಗಳಿಂದ ನಿಮ್ಮದೇ ʻಡಬಲ್ ಇಂಜಿನ್ʼ ಸರ್ಕಾರವಿತ್ತು. ಶಾಸಕರು, ಸಚಿವರು, ಸಂಸದರು ಬಿಜೆಪಿಯವರೇ ಆಗಿದ್ದರು. ನಿಮ್ಮ ಅವಧಿಯಲ್ಲೇ ನಿಮಗೆ ಮರಳು ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜನರ ಮುಂದೆ ನೂರು ಬಾರಿ ಸುಳ್ಳು ಹೇಳಿ, ಅದೇ ಸತ್ಯ ಎಂಬಂತೆ ಬಿಂಬಿಸುವ ಚಾಳಿ ನಿಮ್ಮದು. ಅಧಿಕಾರ ಸಿಕ್ಕಾಗ ದೋಚಿದ್ದು ಬಿಟ್ಟರೆ ದೂರದೃಷ್ಠಿಯ ಒಂದೂ ಕೆಲಸ ಮಾಡಿಲ್ಲ. ಈಗ ದಿಢೀರನೇ ಗಾಢ ನಿದ್ದೆಯಿಂದ ಎಚ್ಚೆತ್ತು, ಕಾಂಗ್ರೆಸ್ ದೂರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದ್ದಾರೆ. ನಿಮ್ಮದೇ ಸರ್ಕಾರದ ಅವಧಿಯಲ್ಲಿ ರಾಜ್ಯದ ತಾಲೂಕು ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಆದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳ ಪೂರೈಕೆ ಮತ್ತು ನಿರ್ವಹಣೆಗಾಗಿ ಹೊಸ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ರಾಜಕೀಯ ಸೇಡಿನ ಆರೋಪದ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಮರಳು ಸಾಗಾಟಗಾರರಿಗೆ ಬಿಸಿ ಮುಟ್ಟಿಸಿದ್ದ ಜಿಲ್ಲಾಧಿಕಾರಿ: ಇತ್ತೀಚಿಗೆ, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಂಗೂಬಾಯಿ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದರು. ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗೆ ಯಾವುದೇ ಮುನ್ಸೂಚನೆ ನೀಡದೇ, ಅಕ್ರಮದ ಕುರಿತು ತಮಗೆ ದೊರೆತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದರು.
Laxmi News 24×7