ಚಿಕ್ಕೋಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಯಾಬಿನೆಟ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ.
ಸಿದ್ದರಾಮಯ್ಯನವರು ಇದ್ದಾಗಲೇ ಸತೀಶ್ಗೆ ಈ ರೀತಿ ಪರಿಸ್ಥಿತಿ ಬಂದಿದೆ. ಬೇರೆ ಯಾರಾದ್ರೂ ಸಿಎಂ ಇದ್ರೆ ಸತೀಶ್ ಪರಿಸ್ಥಿತಿ ಏನು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಸತೀಶ್ ಅವರಿಗೆ ಹಿಂಸೆ ಆಗುತ್ತಿದೆ. ನಾನು ಅವತ್ತು ಕಾಂಗ್ರೆಸ್ನಲ್ಲಿ ಬಂಡಾಯ ಇದ್ದಾಗ ಕೆಲವರು ನನ್ನನ್ನು ಟೀಕಿಸುತ್ತಿದ್ದರು. ಆದರೆ ಇವತ್ತು ಅವರಿಗೆ ವಾಸ್ತವ ಸತ್ಯ ಗೊತ್ತಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇದ್ದಾಗ ಸತೀಶ್ಗೆ ಈ ಪರಿಸ್ಥಿತಿ ಬಂದಿದೆ. ಸತೀಶ್ ಜಾರಕಿಹೊಳಿ ಅವರ ನಡೆಯಿಂದ ಆ ಜನಕ್ಕೆ ಇಂದು ಉತ್ತರ ಸಿಕ್ಕಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬುದು ದೇವರಿಗೆ ಗೊತ್ತು. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಯಲಿ. “ಸರ್ಕಾರದ ಭವಿಷ್ಯ ಎಷ್ಟು ದಿನ ಇರುತ್ತೆ ದೇವರಿಗೆ ಗೊತ್ತು” ನನಗೆ ಸರ್ಕಾರದ ಭವಿಷ್ಯ ಗೊತ್ತಿಲ್ಲ. 224 ಶಾಸಕರು ಒಳ್ಳೆಯ ಕಾರ್ಯವನ್ನು ಮಾಡಲಿ. ಒಳ್ಳೆಯ ಕಾರ್ಯಕ್ಕೆ ನಾವು ಸಹಕಾರ ಮಾಡುತ್ತೇವೆ. ವಿರೋಧ ಪಕ್ಷದಲ್ಲಿ ಇದ್ದರೂ ನಾವು ಸಹಕಾರ ಕೊಡುತ್ತೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ನಯವಾಗಿ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ: ಸಿಎಂ ಸಿದ್ದರಾಮಯ್ಯನವರಿಗೆ ಫ್ರೀ ಹ್ಯಾಂಡ್ ಇಲ್ಲ, ಈ ಅವಧಿಯಲ್ಲಿ ಕೆಲವರು ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಿದ್ದಾರೆ. 2013 ರಲ್ಲಿ ಇದ್ದ ಸಿದ್ದರಾಮಯ್ಯನವರು ಈಗಿಲ್ಲ. ಅವರ ಆ ಮಾತಿನ ದರ್ಪ, ದಕ್ಷತೆ, ಸಿಎಂ ಬಳಿ ಕಾಣುತ್ತಿಲ್ಲ. ನಾನು 2013 ರ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದೆ. ಮುಂದೆ ನೋಡೊಣ. ಅವರು ಯಾಕೆ ಸೈಲೆಂಟ್ ಆಗಿದ್ದಾರೆಂದು ತಿಳಿಯುತ್ತಿಲ್ಲ. ಅವರ ಬಗ್ಗೆ ಗೌರವವಿದೆ. ಯಾಕೆ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಸುತ್ತಮುತ್ತಲಿನ ಕೆಲವರು ಅವರನ್ನು ಫ್ರೀ ಬಿಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.