ಶಿವಮೊಗ್ಗ : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಶಿವಮೊಗ್ಗ ಜಿಲ್ಲೆಗೆ ಪ್ರವೇಶ ಮಾಡದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಒಂದು ಕೋಮಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಹಾನಿಗೊಳಗಾದವರಿಗೆ ಸಾಂತ್ವನ ಹೇಳಲು ಇಂದು ಮುತಾಲಿಕ್ ಅವರು ರಾಗಿಗುಡ್ಡ ಬಡಾವಣೆಗೆ ಭೇಟಿಗೆ ಮುಂದಾಗಿದ್ದರು.
ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಇದರಿಂದಾಗಿ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಪ್ರವೇಶ ನೀಡದಂತೆ ನಿಷೇಧ ಹೇರಬೇಕು ಎಂದು ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಕೋರಿದ್ದರು. ಪೊಲೀಸ್ ಅಧೀಕ್ಷಕರ ಮನವಿ ಮೇರೆಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಅವರು ಆದೇಶ ಹೊರಡಿಸಿದ್ದು, ಇಂದಿನಿಂದ ಮುಂದಿನ 30 ದಿನಗಳವರೆಗೆ ಜಿಲ್ಲೆಗೆ ಪ್ರವೇಶ ಮಾಡದಂತೆ ಸೂಚಿಸಿದ್ದಾರೆ.
ಜಿಲ್ಲಾಡಳಿತದ ಆದೇಶ ಪ್ರತಿರಾತ್ರೋರಾತ್ರಿ ನಿರ್ಬಂಧ ಹಾಕಿದ ಜಿಲ್ಲಾಡಳಿತ : ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಪ್ರಮೋದ್ ಮುತಾಲಿಕ್ ಮೇಲಿದೆ. ರಾಜ್ಯದ ಹತ್ತಾರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣಗಳಿವೆ. ಶಿವಮೊಗ್ಗ ನಗರ ಸೇರಿದಂತೆ ರಾಗಿಗುಡ್ಡದಲ್ಲಿ ಶಾಂತಿ ನೆಲೆಸಿದ್ದು, ಮುತಾಲಿಕ್ ಭಾಷಣದಿಂದ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ಶಿವಮೊಗ್ಗ ಜಿಲ್ಲೆಗೆ ಇಂದಿನಿಂದ ಮುಂದಿನ 30 ದಿನ ಕಾಲ ಪ್ರವೇಶ ಮಾಡಬಾರದೆಂದು ರಾತ್ರೋರಾತ್ರಿ ನೋಟಿಸ್ ಜಾರಿ ಮಾಡಲಾಗಿದೆ.
ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ತನ್ನನ್ನು ಹೊಸನಗರದ ಮಾಸ್ತಿಕಟ್ಟೆ ಬಳಿ ರಾತ್ರಿ ತಡೆದ ಪೊಲೀಸರು ನೋಟಿಸ್ ನೀಡಿ, ದಾವಣಗೆರೆ ಜಿಲ್ಲೆಗೆ ಬಿಟ್ಟು ಬಂದಿದ್ದಾರೆ ಎಂದು ಈಟಿವಿ ಭಾರತಕ್ಕೆ ದೂರವಾಣಿ ಕರೆಯಲ್ಲಿ ಸ್ವತಃ ಮುತಾಲಿಕ್ ಮಾಹಿತಿ ನೀಡಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿದ ಆರೋಪ : ಇನ್ನು ಅನ್ಯ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಅವರ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಳೆದ ಸೆಪ್ಟೆಂಬರ್ ತಿಂಗಳ 22 ರಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ದೂರು ನೀಡಿದ್ದರು.