Breaking News

ಐವರು ಮತದಾರರಿರುವ ಈ ಮತಗಟ್ಟೆ ದೇಶದಲ್ಲೇ ಅತಿ ಚಿಕ್ಕದು; ಎಲ್ಲಿದೆ ಗೊತ್ತಾ?

Spread the love

ರಾಯಪುರ (ಛತ್ತೀಸ್​ಗಢ) : ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅಮೂಲ್ಯ.

ಹೀಗಾಗಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ, ಚುನಾವಣಾ ಆಯೋಗ, ಸಂಘಸಂಸ್ಥೆಗಳು ಜನರಲ್ಲಿ ಭಿನ್ನವಿಸಿಕೊಳ್ಳುತ್ತವೆ. ಓರ್ವ ಮತದಾರ ಇದ್ದರೂ, ಅಲ್ಲಿ ಚುನಾವಣಾಧಿಕಾರಿಗಳು ಕೆಲಸ ಮಾಡಿ ಅವರ ಮತವನ್ನು ಪಡೆದುಕೊಳ್ಳುತ್ತಾರೆ. ಇಂಥದ್ದೇ ಒಂದು ಮತಗಟ್ಟೆ ಛತ್ತೀಸ್​​ಗಢದಲ್ಲಿದೆ. ಇಲ್ಲಿ ಕೇವಲ 5 ಮತದಾರರಿದ್ದು, ಇದು ದೇಶದಲ್ಲಿಯೇ ಅತಿ ಚಿಕ್ಕ ಮತಗಟ್ಟೆ ಎಂಬ ಖ್ಯಾತಿ ಹೊಂದಿದೆ.

ಛತ್ತೀಸ್‌ಗಢದ ಮೊದಲ ವಿಧಾನಸಭಾ ಕ್ಷೇತ್ರವಾದ ಭರತ್‌ಪುರ್ ಸೋನ್‌ಹತ್‌ನ ಶೆರಾದಂಡ್ ಎಂಬ ಗ್ರಾಮದಲ್ಲಿ ಈ ಮತದಾನ ಕೇಂದ್ರವಿದೆ. ಇದು ಚಂದಾ ಗ್ರಾಮ ಪಂಚಾಯಿತಿಯ ಅಧೀನದಲ್ಲಿದೆ. ದಟ್ಟ ಅರಣ್ಯದ ನಡುವೆ ಇರುವ ಈ ಗ್ರಾಮದಲ್ಲಿ ಕೇವಲ ಮೂರು ಮನೆಗಳು ಮಾತ್ರ ಇವೆ. ಮೂವರು ಪುರುಷ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 11 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಇವರ ಪೈಕಿ ಒಟ್ಟು ಐದು ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಹೊಸದಾಗಿ ನವದಂಪತಿ ಸೇರ್ಪಡೆ: 2008 ರಲ್ಲಿ ಈ ಗ್ರಾಮದಲ್ಲಿ ಇಬ್ಬರು ಮಾತ್ರ ಮತದಾರರಿದ್ದರು. ಆ ವೇಳೆ ಗುಡಿಸಲಿನಲ್ಲಿ ಮತಗಟ್ಟೆ ಸ್ಥಾಪಿಸಿ ಮತದಾನ ಮಾಡಿಸಿದ್ದರು. ಇದೀಗ ಹಳ್ಳಿಯಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಮತಗಟ್ಟೆ ನಿರ್ಮಿಸಲಾಗಿದೆ. ಈಗ ಐವರು ಮತದಾರರು ಇದ್ದು, ಹೊಸದಾಗಿ ವಿವಾಹವಾದ ದಂಪತಿಗಳಿಬ್ಬರು ಮತದಾನ ಹಕ್ಕು ಹೊಂದಿದ್ದಾರೆ. ಇವರು ಇದೇ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮತದಾನ ಪ್ರಕ್ರಿಯೆಗೆ ಎರಡು ದಿನ ಮುಂಚಿತವಾಗಿ ಚುನಾವಣಾಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಬಾರಿಯೂ ಇಲ್ಲಿ ಶೇ.100ರಷ್ಟು ಮತದಾನ ದಾಖಲಾಗುತ್ತಿದೆ. ಇದರ ಜೊತೆಗೆ ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಟೊದಲ್ಲಿ 12 ಹಾಗೂ ರೇವಾಲಾದಲ್ಲಿ 23 ಮತದಾರರಿದ್ದಾರೆ. ಇವುಗಳು ಅತಿ ಚಿಕ್ಕ ಮತಗಟ್ಟೆಗಳಲ್ಲಿ ಸ್ಥಾನ ಪಡೆದಿವೆ.

ಛತ್ತೀಸ್‌ಗಢದಲ್ಲಿ ಪ್ರಸ್ತುತ 90 ಶಾಸಕರ ಬಲವುಳ್ಳ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವರ್ಚಸ್ಸು ಮತ್ತು ಅಭಿವೃದ್ಧಿ ರಾಜಕಾರಣದಿಂದಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ, ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಸಂಬಂಧಿತ ಆರೋಪಗಳನ್ನು ಮಾಡುವ ಮೂಲಕ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದೆ.

ಪಂಚರಾಜ್ಯ ಚುನಾವಣೆಗಳಲ್ಲಿ ಒಂದಾಗಿರುವ ಛತ್ತೀಸ್​ಗಢದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನ.7 ಮೊದಲ ಮತ್ತು 17ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ