ಬಾಗಲಕೋಟೆ, ಅಕ್ಟೋಬರ್ 04: ಆ ನಗರದ ಸುತ್ತಮುತ್ತ ಗುಡ್ಡಬೆಟ್ಟಗಳಿವೆ. ಕೆಲವರ ಖಾಸಗಿ ಜಮೀನುಗಳು ಕೂಡ ಬೆಟ್ಟದ ರೀತಿಯಲ್ಲೇ ಇವೆ. ಆದರೆ ಇಂತಹ ಜಾಗದಲ್ಲಿ ಮಣ್ಣು ಗಣಿಗಾರಿಕೆ (mud mining) ಎಗ್ಗಿಲ್ಲದೆ ಸಾಗುತ್ತಿದೆ. ಕೆಲವರು ನಿಯಮ ಪಾಲಿಸಿದರೆ ಬಹುತೇಕರು ನಿಯಮ ಉಲ್ಲಂಘಿಸಿ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ, ಸೀಮಿಕೇರಿ ಗದ್ದನಕೇರಿ ವ್ಯಾಪ್ತಿಯಲ್ಲಿ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಸರಕಾರಿ ಜಾಗೆಯಲ್ಲಿ ಬೆಟ್ಟ ಗುಡ್ಡ ಅಗೆದು ಮಣ್ಣು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಖಾಸಗಿ ಜಮೀನುಗಳ ಭೂಮಿ ಒಡಲನ್ನು ಅಗೆದು ಮಣ್ಣು ದಂದೆ ಸಾಗಾಣಿಕೆ ಮಾಡುತ್ತಿದ್ದಾರೆ.
ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಜೊತೆಗೆ ಇತರೆ ಖಾಸಗಿ ಕೆಲಸಕ್ಕೂ ಮಣ್ಣು ಸಾಗಾಣಿಕೆ ನಡೆಯುತ್ತಿದೆ.ಈ ಮಧ್ಯೆ ಹೆದ್ದಾರಿ ಪ್ರಾಧಿಕಾರದಿಂದ ರಾಜಸ್ವ ಸರಿಯಾಗಿ ತುಂಬುತ್ತಿಲ್ಲ ಎಂಬ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.ಈ ಬಗ್ಗೆ ಪರಿಶೀಲನೆ ಆಗಬೇಕು ಜೊತೆಗೆ ಆಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಬೇಕು ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗುಡ್ಡ, ಗದ್ದನಕೇರಿ ವ್ಯಾಪ್ತಿಯ ಗುಡ್ಡದ ಜಾಗದಲ್ಲಿ ಅನೇಕ ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಲೇ ಇದೆ.
ಆಕ್ರಮ ಮಣ್ಣು ಗಣಿಗಾರಿಕೆಯಿಂದ ಗುಡ್ಡದ ಲಕ್ಷಣಗಳೇ ಬದಲಾಗಿವೆ. ಆದರೆ ಇಷ್ಟೆಲ್ಲ ಆಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಕೆಲವೊಂದು ವಾಹನ ಹಿಡಿದು ಕೇಸ್ ಹಾಕೋದನ್ನು ಬಿಟ್ಟರೆ ಶಾಸ್ವತವಾಗಿ ಇದನ್ನು ಬಂದ್ ಮಾಡುವ ಕೆಲಸ ನಡೆಯುತ್ತಿಲ್ಲ.