ಸಂಯುಕ್ತ ಜನತಾದಳ (ಜೆಡಿಯು) ಶಾಸಕರೊಬ್ಬರು ತಮ್ಮ ಮೊಮ್ಮಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಆತ್ಮರಕ್ಷಣೆಗಾಗಿ ನೀಡಿರುವ ರಿವಾಲ್ವರ್ ಅನ್ನು ಸಾರ್ವಜನಿಕವಾಗಿ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದು, ಆತಂಕದ ಜೊತೆಗೆ ಅಚ್ಚರಿಗೂ ಕಾರಣವಾಗಿದೆ.
ಜೆಡಿಯು ಶಾಸಕ ಗೋಪಾಲ್ ಮಂಡಲ್ ಎಂಬವರು ಮಂಗಳವಾರ ಸಂಜೆ ಭಾಗಲ್‌ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಮೊಮ್ಮಗಳನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಭದ್ರತಾ ಸಿಬ್ಬಂದಿಯೂ ಜೊತೆಗಿದ್ದರು. ಆದರೂ, ಶಾಸಕರು ಕೈಯಲ್ಲಿ ತಮ್ಮಲ್ಲಿದ್ದ ಪಿಸ್ತೂಲ್ ಅನ್ನು ಜನರೆದುರೇ ಬಹಿರಂಗವಾಗಿ ಹಿಡಿದುಕೊಂಡು ಓಡಾಡಿದ್ದಾರೆ. ಇದು ಅಲ್ಲಿದ್ದವರಿಗೆ ಭಯ ತಂದಿದೆ.
ಸಾರ್ವಜನಿಕವಾಗಿ ರಿವಾಲ್ವರ್ ಹಿಡಿದಿದ್ದನ್ನು ಪ್ರಶ್ನಿಸಿದ್ದಕ್ಕೆ, “ಇದು ಕೈಯಲ್ಲಿ ಹಿಡಿದುಕೊಂಡು ತಿರುಗಬೇಕಾದ ವಸ್ತುವೇ ಹೊರತು ಒಳಗೆ ಇಡುವಂತದ್ದಲ್ಲ. ರಿವಾಲ್ವರ್ ಅನ್ನು ಹೀಗೆ ಎಲ್ಲರೆದುರು ಹಿಡಿದು ಓಡಾಡೋದು ನನ್ನ ಸ್ಟೈಲ್. ಹೀಗೆ ಮಾಡಿದರೆ ನನ್ನ ಬೆಂಬಲಿಗರು ಇಷ್ಟಪಡುತ್ತಾರೆ” ಎಂದು ಉದ್ಧಟತನ ಉತ್ತರ ನೀಡಿದ್ದಾರೆ.
ಆತ್ಮರಕ್ಷಣೆಗಾಗಿ ಪಿಸ್ತೂಲ್ ಪರವಾನಗಿ ಪಡೆದಿರುವೆ: “ತಮಗೆ ರಾಜಕೀಯ ದ್ವೇಷಿಗಳು ಹೆಚ್ಚಿದ್ದಾರೆ. ಅದಕ್ಕಾಗಿಯೇ ನಾವು ಪಿಸ್ತೂಲ್ ಹೊಂದುವ ಪರವಾನಗಿ ಪಡೆದುಕೊಂಡಿದ್ದೇನೆ. ಈ ಹಿಂದೆ ನನ್ನನ್ನು ವಿರೋಧಿಗಳು ಹಿಂಬಾಲಿಸುತ್ತಿದ್ದರು. ಪ್ರಾಣ ಭಯ ಇರುವ ಕಾರಣ ನಾನು ಬಂದೂಕು ಹೊಂದಬೇಕಾಯಿತು. ಈಗ ರಾಜಕೀಯ ಶತ್ರುಗಳು ನನ್ನ ಬೆನ್ನು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸಂಸದನಾಗುತ್ತೇನೆ. ಹೀಗಾಗಿ ಅಪಾಯ ಎದುರಾಗಬಾರದು ಎಂದು ರಿವಾಲ್ವರ್ ಜೊತೆಗೆ ತರುತ್ತೇನೆ” ಎಂದಿದ್ದಾರೆ.
“ಆತ್ಮರಕ್ಷಣೆಗಾಗಿ ಕೈಯಲ್ಲಿ ರಿವಾಲ್ವರ್ ಹಿಡಿದುಕೊಂಡಿರುತ್ತೇನೆ. ಯಾರಾದರೂ ಇಲ್ಲಿ ಅಥವಾ ಎಲ್ಲಿಯಾದರೂ ನನ್ನ ಮೇಲೆ ದಾಳಿ ಮಾಡಿದರೆ, ಅವರನ್ನು ಶೂಟ್ ಮಾಡುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸಂಸದನಾಗಿ ಸ್ಪರ್ಧಿಸಲಿದ್ದೇನೆ. ವಿರೋಧಿಗಳ ಸಂಖ್ಯೆಯೂ ಹೆಚ್ಚಾಗಿದೆ” ಎಂದು ಸಮಜಾಯಿಷಿ ನೀಡಿದರು.