ಬೆಳಗಾವಿ : ಬೆಳಗಾವಿಯಲ್ಲಿಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಈದ್-ಮಿಲಾದ್ ಮೆರವಣಿಗೆ ವಿಜೃಂಭಣೆಯಿಂದ ಜರುಗಿದ್ದು, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಕೂಡ ಸಾಥ್ ನೀಡುವ ಮೂಲಕ ಭಾವೈಕ್ಯತೆ ಮೆರೆದರು.
ಪ್ರತಿ ವರ್ಷ ಈದ್-ಮಿಲಾದ್ ದಿನವೇ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿಯೂ ಸೆಪ್ಟೆಂಬರ್ 28ರಂದು ಹಬ್ಬದ ದಿನವೇ ಮೆರವಣಿಗೆಗೆ ಎಲ್ಲ ರೀತಿ ಸಿದ್ಧತೆಯನ್ನು ಮುಸ್ಲಿಂ ಸಮುದಾಯದವರು ಮಾಡಿಕೊಂಡಿದ್ದರು. ಆದರೆ, ಅದೇ ದಿನ ಸಾರ್ವಜನಿಕ ಗಣೇಶ ಮೂರ್ತಿಗಳ ನಿಮಜ್ಜನೆ ಮೆರವಣಿಗೆಯೂ ಬಂದಿದ್ದರಿಂದ ಈದ್ ಮೆರವಣಿಗೆ ಮುಂದೂಡಲಾಗಿತ್ತು. ಹಾಗಾಗಿ, ಭಾನುವಾರ ನಡೆದ ಈದ್ ಮೆರವಣಿಯಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮುಖಂಡರೂ ಭಾಗಿಯಾಗಿ ಸಾಮರಸ್ಯ ಪ್ರದರ್ಶಿಸಿದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ಬೆಳಗಾವಿ ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆ. ಇಲ್ಲಿ ಎಲ್ಲ ಹಬ್ಬಗಳನ್ನೂ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾ ಸಾಮರಸ್ಯ ಮೆರೆಯುತ್ತಾ ಬಂದಿದ್ದೇವೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ. ಎಲ್ಲರಿಗೂ ಒಳಿತಾಗಲಿ ಎಂದು ನಾವೆಲ್ಲಾ ದೇವರಲ್ಲಿ ಪ್ರಾರ್ಥಿಸೋಣ ಎಂದರು.
Laxmi News 24×7