ದಾವಣಗೆರೆ: ಸಾಹಿತಿಗಳಿಗೆ ಎರಡು ವರ್ಷಗಳಿಂದ ಜೀವ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ ಎಂಬ ಆರೋಪ ಎದುರಿಸುತ್ತಿರುವ ದಾವಣಗೆರೆಯ ಶಿವಾಜಿ ರಾವ್ ಜಾಧವ್ ಬಂಧನವಾಗಿದೆ. ಸಿಸಿಬಿ ಪೊಲೀಸರು ದಾವಣಗೆರೆ ನಗರದ ಈಡ್ಲ್ಯೂಎಸ್ ಕಾಲೋನಿಯ ಆರೋಪಿಯ ನಿವಾಸದಲ್ಲಿಂದು ಮಹಜರು ಮಾಡಿದರು. ಎರಡು ಕಾರುಗಳಲ್ಲಿ ಆಗಮಿಸಿದ ಸಿಸಿಬಿ ಅಧಿಕಾರಿಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ಆರೋಪಿ ಶಿವಾಜಿ ರಾವ್ ಜಾಧವ್ ಮನೆಯಲ್ಲಿ ಮಹಜರು ಮಾಡಿ ಮಾಹಿತಿ ಕಲೆ ಹಾಕಿ ಆರೋಪಿಗೆ ಸೇರಿದ ಪೆನ್ನು, ಡೈರಿ ಕೆಲ ಪುಸ್ತಕಗಳನ್ನು ವಶಕ್ಕೆ ಪಡೆದರು.
ಇನ್ನು ಆರೋಪಿ ಕುಟುಂಬಸ್ಥರಿಂದಲೂ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಪತ್ರ ಬರೆಯಲು ಬಳಸುತ್ತಿದ್ದ ಸ್ಥಳ, ಮನೆಯ ಮಹಡಿ, ಹಾಗೂ ಆತನ ಬೆಡ್ ರೂಂ ಹೀಗೆ ಸಾಕಷ್ಟು ಕಡೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಈ ವೇಳೆ, ಆರೋಪಿಯ ತಾಯಿ ಹಾಗೂ ಸಹೋದರ ಕೂಡ ಹಾಜರಿದ್ದರು. ಇನ್ನು ಆರೋಪಿ ಕೆಲಸ ಮಾಡುತ್ತಿದ್ದ ನಗರದ ಶಿವಪ್ಪ ವೃತ್ತದ ಬಳಿ ಇರುವ ರಾಜು ಪ್ರಿಂಟರ್ಸ್ ಹಾಗೂ ಪತ್ರ ಬರೆಯಲು ಪೆನ್ನು, ಪೇಪರ್ ಹಾಗೂ ಕವರ್ ಖರೀದಿ ಮಾಡಿದ್ದಾ ಸುರ್ ಸಾ ಪೇಪರ್ ಎಂಬ ಅಂಗಡಿಯಲ್ಲಿ ಕೂಡ ಮಹಜರು ಮಾಡಿದರು.
ಬಳಿಕ ತೆರಳಿ ಪತ್ರ ಬರೆಯುತ್ತಿದ್ದ ಸ್ಥಳವಾದ ಹೈಸ್ಕೂಲ್ ಮೈದಾನದ ಬಳಿ ಇರುವ ಜಿಲ್ಲಾ ಲೈಬ್ರರಿಯಲ್ಲೂ ಮಹಜರು ಮಾಡಿ ಮಹಿತಿ ಕಲೆ ಹಾಕಿದರು. ಇನ್ನು ಎಲ್ಲೆಲ್ಲಿ ಮಹಜರು ಮಾಡಿದ್ದಾರೋ ಅಲ್ಲಿಯವರ ದೂರವಾಣಿ ಸಂಖ್ಯೆ ಪಡೆದು ವಿಚಾರಣೆಗೆ ಹಾಜರ್ ಆಗುವಂತೆ ಹೇಳಿದ್ದಾರೆಂದು ಸುರ್ ಸಾ ಪೇಪರ್ ಅಂಗಡಿಯ ಮಾಲೀಕ ಮಹಜರ್ ಬಳಿಕ ಮಾಹಿತಿ ನೀಡಿದರು.