Breaking News

ಬೆಂಗಳೂರು ಬಂದ್ : ವ್ಯಾಪಾರ ವಹಿವಾಟು ಸ್ಥಗಿತದಿಂದ ಅಂದಾಜು 200 ಕೋಟಿ ನಷ್ಟ: ಎಫ್‌ಕೆಸಿಸಿಐ

Spread the love

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಡೆದ ಬೆಂಗಳೂರು ಬಂದ್​ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಬಂದ್​​ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಸಂಭವಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಬೆಂಗಳೂರು ಬಂದ್​ಗೆ ಕರೆ ನೀಡಿದ್ದವು. ಬಹುತೇಕ ಕಡೆ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ಹೋಟೆಲ್​ಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಭಾಗಿಯಾದರು.

ಬಂದ್ ಹಿನ್ನೆಲೆ ನಗರದಲ್ಲಿ ವಾಹನ‌ ಸಂಚಾರ, ಜನರ ಓಡಾಟದ ಪ್ರಮಾಣವೂ ಕಡಿಮೆ ಇತ್ತು. ಹೀಗಾಗಿ ಬೆಂಗಳೂರು ಬಹುತೇಕ ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟು, ಹೋಟೆಲ್​, ಸಿನಿಮಾ ಮಂದಿರಗಳು, ಮಾಲ್​ಗಳು, ಬಾರ್​ಗಳು, ಸೂಪರ್ ಮಾರ್ಕೆಟ್​​ಗಳು ಬಹುತೇಕ ಬಂದ್ ಆಗಿದ್ದವು. ಹೀಗಾಗಿ ಬೆಂಗಳೂರಲ್ಲಿ ಬಂದ್​ನಿಂದ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು.

ವಾಣಿಜ್ಯ ಒಕ್ಕೂಟ ಎಫ್​ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲ್ ರೆಡ್ಡಿ ಅವರು ಬೆಂಗಳೂರು ಬಂದ್​ನಿಂದ ಉಂಟಾಗಿರುವ ನಷ್ಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನಲ್ಲಿನ ಆದಾಯದ ಪಾಲು ಶೇ.60ರಷ್ಟಿದೆ. ಬಂದ್​ನಿಂದ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಬೆಂಗಳೂರು ಬಂದ್​ನಿಂದ ಜಿಎಸ್​ಟಿ ಸಂಗ್ರಹ ವ್ಯತ್ಯಯವಾಗಿದ್ದು, 10 ತಾಸಿನ ಬೆಂಗಳೂರು ಬಂದ್​ನಿಂದ ಅಂದಾಜು ಸುಮಾರು 200-250 ಕೋಟಿ ರೂ‌. ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಇಂತಹ ಬಂದ್​ಗಳಿಂದ ಆರ್ಥಿಕ ವಹಿವಾಟು ಕುಂಠಿತವಾಗಿ ನಷ್ಟ ಉಂಟಾಗುತ್ತದೆ ಎಂದು ತಿಳಿಸಿದರು.

ಬಿಎಂಟಿಸಿ ಬಸ್‌, ಖಾಸಗಿ ವಾಹನ ಸಂಚಾರ: ಇನ್ನು ಕೆಎಸ್‌ಆರ್​ಟಿಸಿ, ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆ ಎಂದಿನಂತೆ ನಡೆದಿದೆ. ಆಟೋ, ಖಾಸಗಿ ವಾಹನಗಳ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಕಂಡು ಬಂದಿಲ್ಲ. ಆದರೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಬಿಎಂಟಿಸಿ ಹಾಗೂ ಕೆಎಸ್‍ಆರ್​ಟಿಸಿ ನೌಕರರ ಸಂಘವು ಮೊದಲು ಬಂದ್​ಗೆ ಬೆಂಬಲ ನೀಡುವುದಾಗಿ ತಿಳಿಸಿತ್ತು. ಮಂಗಳವಾರ ಬಿಎಂಟಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲ್ಲ ಎಂದು ನೌಕರರ ಸಂಘ ಹೇಳಿತ್ತು. ಆದರೆ ಬಿಎಂಟಿಸಿ ಎಂದಿನಂತೆ ಕಾರ್ಯಾಚರಣೆ ನಡೆಸಿದೆ. ಮಾತ್ರವಲ್ಲದೇ ಖಾಸಗಿ ವಾಹನಗಳೂ ಸಹ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ