ಗಂಗಾವತಿ(ಕೊಪ್ಪಳ): ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳದಂತೆ ಧಾರವಾಡದ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದಾದ ಬೆನ್ನಲ್ಲೇ ಭಾನುವಾರ ರಾಯರಮಠದ ಅನುಯಾಯಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸಂಭ್ರಮಿಸಿದರು.
ರಾಘವೇಂದ್ರ ಸ್ವಾಮಿ ಮಂತ್ರಾಲಯದ ಪೀಠಾಧಿಪತಿ ಸುಭುಧೇಂದ್ರ ತೀರ್ಥರ ಸೂಚನೆ ಮೇರೆಗೆ ಭಾನುವಾರ ರಾಯರ ಮಠದ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ನೆರೆದು ಜಯತೀರ್ಥ ವೃಂದಾವನಕ್ಕೆ ಅಷ್ಟೋತ್ತರ ಕಾರ್ಯಕ್ರಮವನ್ನು ನೆರೆವೇರಿಸಿದರು.
ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಸುಪ್ರಭಾತ, ಸಕಲ ಬೃಂದಾವನಗಳಿಗೆ ಅಭಿಷೇಕ, ವಿಶೇಷ ಪಂಚಾಮೃತಾಭಿಷೇಕ, ಅಷ್ಟೋತ್ತರ, ಭಜನೆ, ಹೂವಿನ ಅಲಂಕಾರ, ಸಕಲ ಯತಿಗಳ ಬೃಂದಾವನಕ್ಕೆ ಹಸ್ತೋದಕ, ಮಹಾಮಂಗಳಾರತಿಯಂತ ವಿವಿಧ ಪೂಜಾ ವಿಧಾನಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂತ್ರಾಲಯ ದಾಸಸಾಹಿತ್ಯದ ಸಂಚಾಲಕ ಸುಳಾದಿ ಹನುಮೇಶಾಚಾರ್ ಮಾತನಾಡಿ, ಸುಭುಧೇಂದ್ರ ತೀರ್ಥರ ಸೂಚನೆ ಮೇರೆಗೆ ಇನ್ನು ಮುಂದೆ ಪ್ರತಿ ತಿಂಗಳು ನವವೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಾರಿಯ ಅಷ್ಟೋತ್ತರದ ವಿಶೇಷತೆ ಏನೆಂದರೆ, ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಏಕಸದಸ್ಯ ಪೀಠವು ರಾಯರಮಠದ ಅನುಯಾಯಿಗಳಿಗೆ ಯಾವುದೇ ಪೂಜಾ ಕೈಂಕರ್ಯ ಕೈಗೊಳ್ಳದಂತೆ ನಿರ್ಬಂಧ ವಿಧಿಸಿತ್ತು. ಆದರೆ ಪ್ರಶ್ನಿಸಿ ರಾಯರಮಠದಿಂದ ಮೇಲ್ಮನವಿ ಸಲ್ಲಿಸಲಾಗಿತ್ತು. ಧಾರವಾಡದ ಹೈಕೋರ್ಟ್ ದ್ವಿಸದಸ್ಯ ಪೀಠವು, ರಾಯರ ಮಠದ ಅರ್ಜಿಯನ್ನು ಮಾನ್ಯ ಮಾಡಿ ಏಕಸದಸ್ಯ ಪೀಠದ ಆದೇಶ ರದ್ದು ಮಾಡಿದೆ. ರಾಯರ ಮಠದ ಪರ ತೀರ್ಪು ಬರುತ್ತಿದ್ದಂತೆ ಇದು ಸಹಜವಾಗಿ ನಮ್ಮಲ್ಲಿ ಸಂತಸಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ನವವೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಹೆಸರಿನಲ್ಲಿ ಯಾವುದೇ ಅಷ್ಟೋತ್ತರ ಪೂಜೆ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವಂತಿಲ್ಲ ಎಂಬ ನಿರ್ಬಂಧ ತೆರವಾಗಿದ್ದು, ನಮ್ಮಲ್ಲಿ ಸಂತೋಷ ಮನೆಮಾಡಿದೆ. ಹೀಗಾಗಿ ದೇಶಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀಜಯ ತೀರ್ಥರಿಗೆ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಭಕ್ತರು ಪ್ರತಿ ತಿಂಗಳು ನಡೆಯುವ ಅಷ್ಟೋತ್ತರ ಪಾರಾಯಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ದ್ವಿಸದಸ್ಯ ಪೀಠ ತೀರ್ಪು: ಮಾಧ್ವ ಸಂಪ್ರದಾಯದ ಧಾರ್ಮಿಕ ತಾಣ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿನ ವಿವಾದಿತ ಜಯತೀರ್ಥ- ರಘುವರ್ಯರ ವೃಂದಾವನದ ಪೂಜೆಯ ಸಂಬಂಧ ಈ ಹಿಂದೆ ಧಾರವಾಡದ ಏಕಸದಸ್ಯ ಪೀಠ ನೀಡಿದ್ದ ಪೂಜೆಯ ನಿರ್ಬಂಧದ ತೀರ್ಪನ್ನು ದ್ವಿಸದಸ್ಯ ಪೀಠ ರದ್ದುಗೊಳಿಸಿದೆ. ಧಾರವಾಡದ ಹೈಕೋರ್ಟ್ನ ದ್ವಿಸದಸ್ಯ ಪೀಠದ ಆದೇಶದಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳು, ನವವೃಂದಾವನ ಗಡ್ಡೆಯಲ್ಲಿರುವ ಜಯತೀರ್ಥರ ವೃಂದಾವನಕ್ಕೆ ಈ ಮೊದಲಿನಂತೆ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಂತಾಗಿದೆ.