ನವದೆಹಲಿ: ಹೊಸ ಸಂಸತ್ ಭವನ ಪ್ರವೇಶಿಸಿದ ಮೊದಲ ದಿನವೇ ಪ್ರಥಮ ಮಸೂದೆಯಾಗಿ ಮಹಿಳಾ ಮೀಸಲಾತಿ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ್ದು, ಐತಿಹಾಸಿಕ ಮುನ್ನುಡಿ ಬರೆದಿದೆ.
ಇದು ದೇಶಾದ್ಯಂತ ಹರ್ಷ ತಂದಿದೆ. ಬಿಜೆಪಿ ಕಾರ್ಯಕರ್ತರು ಸೇರಿದಂತೆ ವಿವಿಧ ಪಕ್ಷಗಳ ನಾಯಕಿಯರು ಮತ್ತು ಕಾರ್ಯಕರ್ತರು ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಸರ್ಕಾರದ ಈ ನಡೆಗೆ ಸರ್ವಪಕ್ಷಗಳು ಶ್ಲಾಘನೆ ವ್ಯಕ್ತಪಡಿಸಿವೆ.
27 ವರ್ಷಗಳಿಂದ ಕಾಗದದಲ್ಲೇ ಉಳಿದಿದ್ದ ಮಸೂದೆಯು ಈಗ ಸಂಸತ್ತಿನಲ್ಲಿ ಚರ್ಚೆಗೆ ಬಂದಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ವಿಧೇಯಕವನ್ನು ಮಂಡಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು. ಇದಾದ ಬಳಿಕ ನಡೆದ ಅಲ್ಪ ಚರ್ಚೆಯಲ್ಲಿ ಮಸೂದೆಯ ಮಾಹಿತಿಯನ್ನು ನೀಡಲು ವಿಪಕ್ಷದವರು ಕೋರಿದರು. ಸದನವನ್ನು ಡಿಜಿಟಲೀಕರಣ ಮಾಡಿದ ಕಾರಣ ವೆಬ್ಸೈಟ್ನಲ್ಲಿ ಅದರ ಮಾಹಿತಿ ಅಳವಡಿಸಲಾಗಿದೆ ಎಂದು ಸರ್ಕಾರ ತಿಳಿಸಿತು. ಇದಾದ ಬಳಿಕ ಉಭಯ ಸದನಗಳನ್ನು ನಾಳೆಗೆ ಮುಂಡೂಡಲಾಯಿತು.
ಮಹಿಳೆಯರ ಸಂಭ್ರಮಾಚರಣೆ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಧೇಯಕವನ್ನು ಮಂಡನೆ ಮಾಡಿದ ಸುದ್ದಿ ಹರಡಿದ ಬಳಿಕ ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಸೇರಿದಂತೆ ನಾನಾ ರಾಜ್ಯಗಳಲ್ಲಿ ಮಹಿಳೆಯರು ಸಂಭ್ರಮಾಚರಣೆ ನಡೆಸಿದರು. ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂತಸ ವ್ಯಕ್ತಪಡಿಸಿದರು.
ರಾಜಕೀಯ ನಾಯಕಿಯರ ಅಭಿಮತವಿದು: ಮಸೂದೆಯ ಬಗ್ಗೆ ಸಂತಸ ಹಂಚಿಕೊಂಡ ಬಿಆರ್ಎಸ್ ನಾಯಕಿ ಕೆ ಕವಿತಾ ಅವರು, ಮೀಸಲಾತಿ ಮಸೂದೆ ಮಂಡನೆಯಾಗಿರುವುದು ಸಂತೋಷ ತಂದಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡು ರಾಜ್ಯಸಭೆಗೆ ಬರಲಿದೆ. ಆದಷ್ಟು ಬೇಗ ಚರ್ಚೆ ನಡೆಸಿ ಇದೇ ಅಧಿವೇಶನದಲ್ಲಿಯೇ ಅಂಗೀಕಾರ ಸಿಗಲಿ. ಆಡಳಿತಾರೂಢ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಶ್ಲಾಘನೀಯ ವಿಚಾರವಾಗಿದೆ ಎಂದರು.