ಬೆಳಗಾವಿ: ಗಣಪನ ಆಗಮನಕ್ಕೆ ಕುಂದಾನಗರಿ ಸಜ್ಜಾಗಿದ್ದು, ಭರದ ಸಿದ್ಧತೆಯಲ್ಲಿ ಜನರು ತೊಡಗಿದ್ದಾರೆ. ಮಾರುಕಟ್ಟೆ ಪ್ರದೇಶಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಇನ್ನು, ಪೂಜಾ ಸಾಮಗ್ರಿ ಖರೀದಿಗೆ ಜನ ಅಂಗಡಿಗಳಿಗೆ ಮುಗಿ ಬಿದ್ದಿರುವುದು ಇಂದು ಕಂಡು ಬಂತು.
ಹೌದು.. ಇಡೀ ರಾಜ್ಯದಲ್ಲೇ ಬೆಳಗಾವಿಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಸಲ ಸೆ.18ರಂದು ಕೆಲವರು ಚೌತಿ ಆಚರಿಸುತ್ತಿದ್ದರೆ ಮತ್ತೊಂದಿಷ್ಟು ಜನ 19ರಂದು ಆಚರಿಸಲು ಮುಂದಾಗಿದ್ದಾರೆ. ಹಾಗಾಗಿ ಭಾನುವಾರ ಬೆಳಗಾವಿಯ ಗಣಪತಿ ಗಲ್ಲಿ, ಖಡೇಬಜಾರ್, ಮಾರುತಿ ಗಲ್ಲಿ, ಪಾಂಗುಳ ಗಲ್ಲಿ, ರಾಮದೇವ ಗಲ್ಲಿ, ಶನಿವಾರ ಕೂಟ, ಕಡೋಲ್ಕರ್ ಗಲ್ಲಿ, ಶಾಹಪುರ ಖಡೇಬಜಾರ್ ಸೇರಿದಂತೆ ಮತ್ತಿತರ ಮಾರುಕಟ್ಟೆ ಪ್ರದೇಶಗಳಲ್ಲಿ ನಗರ, ಜಿಲ್ಲೆ, ಪಕ್ಕದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಆಗಮಿಸಿದ್ದ ಜನರು ಭರ್ಜರಿ ವ್ಯಾಪಾರ ಮಾಡಿದರು.
ಸದಾಶಿವ ನಗರದಿಂದ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕ ಸುರೇಶ ಕೋಣಿ ಮಾತನಾಡಿ, ಗಣೇಶನ ಹಬ್ಬಕ್ಕೆ ಹೂವು, ಹಣ್ಣು, ಸ್ವೀಟ್ಸ್ ಖರೀದಿಸಿದ್ದೇವೆ. ಮಾರ್ಕೆಟ್ ನಲ್ಲಿ ಬಹಳ ರಶ್ ಇದೆ ಎಂದರು.
ಪೂಜೆಗೆ ಬೇಕಾದ ಊದಬತ್ತಿ, ಎಣ್ಣೆ, ಕರ್ಪೂರ, ಮುತ್ತಿನಹಾರ-ತೋರಣ, ಗೆಜ್ಜೆ ವಸ್ತ್ರ, ಆಸನ, ಅಲಂಕಾರಿಕ ವಸ್ತುಗಳು, ರಂಗೋಲಿ, ಲಟಕನ್, ಪಟಾಕಿ, ಅರಿಶಿಣ, ಕುಂಕುಮ, ಸಿಂಧೂರ, ಅಷ್ಟಗಂಧ, ಬತ್ತಿ, ಜೇನುತುಪ್ಪ, ಅತ್ತರ, ಕವಡಿ ಊದು, ಧೂಪ, ಟೆಂಗಿನಕಾಯಿ ಸೇರಿ ಇನ್ನಿತರ ವಸ್ತುಗಳನ್ನು ಜನ ಖರೀದಿಸಿದರು.