ಕಲಬುರಗಿ: ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು.
ಇದಕ್ಕೂ ಮುನ್ನ ಹೈದ್ರಾಬಾದ್ ಕರ್ನಾಟಕ ವಿಮೋಚನಾ ರೂವಾರಿ ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಯೋಜನೆಗಳ ಬಗ್ಗೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ವಿವರಿಸಿದರು. ಅಲ್ಲದೆ ನೂತನ ಸಾರಿಗೆ ಬಸ್, ಹೆಲ್ತ್ ಎಟಿಎಂ ಲೋಕಾರ್ಪಣೆ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವ ಮೂಲಕ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ. ಹೈದ್ರಾಬಾದ್ನಿಂದ ಬೆಳಗ್ಗೆ 8-30 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯ, ನೇರವಾಗಿ ಪಟೇಲ್ ವೃತ್ತಕ್ಕೆ ಆಗಮಿಸಿ, ಸರ್ಧಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಬೃಹತ್ ಗಾತ್ರದ ಹೂಮಾಲೆ ಅರ್ಪಣೆ ಮಾಡಿದರು.
ಬಳಿಕ ನೇರವಾಗಿ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ಪೊಲೀಸ್, ಎನ್.ಸಿ.ಸಿ ಸೇರಿದಂತೆ ನಾನಾ ತುಕಡಿಗಳಿಂದ ನಡೆದ ಪರೇಡ್ ಗೌರವ ಪಡೆದರು. ಇದೇ ವೇಳೆ ಸ್ವತಂತ್ರ ಸೇನಾನಿಗಳಿಗೆ ಸಾಧಕರಿಗೆ ಅಭಿನಂದಿಸಿ ಗೌರವಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.