ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಈ ತಿಂಗಳ 19 ಅಥವಾ 20 ರಂದು ಫೈನಲ್ ಆಗಲಿದೆ.
ಮುಂದಿನ ವಾರ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದು, ಸೆ.19 ಇಲ್ಲವೇ 20 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಇದರ ನಡುವೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯ ಕುರಿತು ಅಭಿಪ್ರಾಯ ಪಡೆಯಲು ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೆಹಲಿಗೆ ಬರಲು ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಬಿಎಸ್ವೈ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ. ಮಧ್ಯಾಹ್ನ ದೆಹಲಿ ತಲುಪುವ ಅವರು ಸಂಜೆ ವರಿಷ್ಠರನ್ನು ಭೇಟಿ ಮಾಡಿ ಮೈತ್ರಿ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೀಗೆ ಕರ್ನಾಟಕದಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಸಜ್ಜಾಗುತ್ತಿದ್ದು, ಮೈತ್ರಿ ಮಾತುಕತೆ ಅಂತಿಮಗೊಂಡ ನಂತರ ರಾಜ್ಯ ರಾಜಕೀಯಕ್ಕೆ ಹೊಸ ರಂಗು ಬರಲಿದೆ. ಜೆಡಿಎಸ್ ಜೊತೆಗಿನ ಮೈತ್ರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಾಗಿದ್ದು, ಈ ಬೆಳವಣಿಗೆ ಉಭಯ ಪಕ್ಷಗಳಲ್ಲೂ ಚಟುವಟಿಕೆ ಗರಿಗೆದರುವಂತೆ ಮಾಡಿದೆ.