ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಖಚಿತವಾದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇಂದು ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಪಕ್ಷದ ಮುಂದಿನ ಸಂಘಟನಾತ್ಮಕ ಚಟುವಟಿಕೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಮತ್ತು ಜೆಡಿಎಸ್‌ನೊಂದಿಗಿನ ಹೊಂದಾಣಿಕೆಯ ನಂತರದ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತದೆ.
ಇಂದು ಬೆಳಿಗ್ಗೆ 10.30ಕ್ಕೆ ಸಭೆ ಆಯೋಜಿಸಲಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ ಸೇರಿದಂತೆ ಪಕ್ಷದ ಹಲವು ನಾಯಕರು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಪಕ್ಷದ ಈವರೆಗಿನ ಸಂಘಟನಾತ್ಮಕ ಚಟುವಟಿಕೆಗಳ ವರದಿ ಪರಾಮರ್ಶೆ ನಡೆಯಲಿದ್ದು, ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಿದ್ದವಾಗುವ ನಿಟ್ಟಿನಲ್ಲಿ ಯಾವ ರೀತಿ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸಬೇಕು ಎನ್ನುವ ಕುರಿತು ಮಾತುಕತೆ ನಡೆಯಲಿದೆ. ಲೋಕಸಭಾ ಚುನಾವಣೆಗೆ ಸಿದ್ದತೆ ಆರಂಭಿಸುವ ಬಗ್ಗೆ ಸಮಾಲೋಚನೆ ನಡೆದು ಪದಾಧಿಕಾರಿಗಳ ಅಭಿಪ್ರಾಯ ಪಡೆಯಲಾಗುತ್ತದೆ. ಹಿರಿಯ ನಾಯಕ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 15 ಅಥವಾ 16ರಿಂದ ಆರಂಭಿಸಲಿರುವ ರಾಜ್ಯ ಪ್ರವಾಸದ ಸಿದ್ಧತೆ ಪಕ್ಷದ ಸಹಕಾರ ಇತ್ಯಾದಿಗಳ ಕುರಿತು ಚರ್ಚೆಯಾಗಲಿದೆ.