ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಆಡಳಿತ ವ್ಯವಸ್ಥೆ ಯಾವ ರೀತಿ, ಜನರ ಪರಿಸ್ಥಿತಿ ಹೇಗಿದೆ ಎಂಬುವುದಕ್ಕೆ ತಾಜಾ ಉದಾಹರಣೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ. ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಹಿಂದೇಟು ಹಾಕುತ್ತಿದ್ದು ನಗರಪ್ರದೇಶಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಎದುರಾಗಿದ್ದು ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ…
ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ಮಾಡಬೇಕೆಂಬ ಹೋರಾಟ ಇಂದು ನಿನ್ನೆಯದಲ್ಲ. ಚಿಕ್ಕೋಡಿಯಂತೂ ಜಿಲ್ಲೆ ಮಾಡಲಿಲ್ಲ ಕನಿಷ್ಠ ಪಕ್ಷ ಚಿಕ್ಕೋಡಿ ಉಪವಿಭಾಗಕ್ಕೆ ಒಳ್ಳೆಯ ಸೌಲಭ್ಯವನ್ನಾದರೂ ನೀಡಿ ಅಂತಾ ಜನ ಅಂಗಲಾಚುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗದ ಜನರು ಪ್ರತಿಯೊಂದಕ್ಕೂ ಸರ್ಕಾರದ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆನೇ ಮೇಜರ್ ಸರ್ಜರಿ ಮಾಡುವ ಅವಶ್ಯಕತೆ ಇದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳು ತಜ್ಞ, ಕಿವಿ,ಮೂಗು,ಗಂಟಲು(ENT) ತಜ್ಞ ವೈದ್ಯರ ಕೊರತೆ ಎದುರಾಗಿದೆ. ವಿಧಿ ಇಲ್ಲದೇ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕಬ್ಬೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಸ್ತ್ರೀರೋಗ ತಜ್ಞರ ಕೊರತೆ ಇದೆ. ಅಥಣಿ ತಾಲೂಕು ಆಸ್ಪತ್ರೆಯಲ್ಲಿಯೂ ಇಎನ್ಟಿ ವೈದ್ಯರು ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ಸಿಗದ ಕಾರಣ ಚಿಕ್ಕೋಡಿ ಉಪವಿಭಾಗದ ಬಹುತೇಕ ಜನರು ಮಹಾರಾಷ್ಟ್ರದ ಸಾಂಗಲಿ, ಮಿರಜ್, ಕೊಲ್ಹಾಪುರದ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಂಡು ತಜ್ಞ ವೈದ್ಯರ ನೇಮಿಸಿ ಸರ್ಕಾರಿ ಆಸ್ಪತ್ರೆ ಸುಧಾರಣೆ ಮಾಡಬೇಕು. ಚಿಕ್ಕೋಡಿ ಜಿಲ್ಲೆ ಮಾಡಿ ಮಾಡಿ ಅಂತಾ ಹೋರಾಟ ಮಾಡಿದರೂ ಅದು ಆಗುತ್ತಿಲ್ಲ. ಕೊನೆಯ ಪಕ್ಷ ಇಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನಾದರೂ ಸುಧಾರಿಸಿ ಅಂತಾ ಜನರು ಒತ್ತಾಯಿಸುತ್ತಿದ್ದಾರೆ.