ಕಿತ್ತೂರು ಕರ್ನಾಟಕದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮೂಲಕ ಬಣಜಿಗ ಸಮುದಾಯದ ನಾಯಕರಿಗೆ ಮಣೆ ಹಾಕಲು ಆಡಳಿತಾರೂಢ ಕಾಂಗ್ರೆಸ್ ಯತ್ನ ನಡೆಸಿದೆ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಶೆಟ್ಟರ್ ಅವರು ಬಲಿಷ್ಠ ಬಣಜಿಗ ಸಮುದಾಯಕ್ಕೆ ಸೇರಿದ ನಾಯಕರು. ಈ ಹಿನ್ನೆಲೆಯಲ್ಲಿ ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಶೆಟ್ಟರ್ ಭೇಟಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರಾಗಿರುವ ಯಾದವಾಡ ಅವರು ಬಣಜಿಗ ಸಮುದಾಯಕ್ಕೆ ಸೇರಿದ ಮುಖಂಡರು. ರಾಮದುರ್ಗದಲ್ಲಿರುವ ಅವರ ಮನೆಗೆ ಭೇಟಿ ನೀಡಿರುವ ಶೆಟ್ಟರ್ ಯಾದವಾಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗದ ಟಿಕೆಟ್ ಆಕಾಂಕ್ಷಿಯಾಗಿದ್ದ ಯಾಡವಾಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.ಕಾಂಗ್ರೆಸ್ ಶೆಟ್ಟರ್ ಮೂಲಕ ಯಾಡವಾಡ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ.
ಯಾದವಾಡ ಅವರು ಶೆಟ್ಟರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಬ್ಬರೂ ದೂರದ ಸಂಬಂಧಿಗಳೆಂದೂ ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಎರಡು ದಶಕಗಳ ಕಾಲ ಶೆಟ್ಟರ್ ಜೊತೆಗೆ ಯಾದವಾಡ ಗುರುತಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ನಾಯಕರು ಯಾದವಾಡ ಅವರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ
ಬಿಜೆಪಿಯ ಬಣಜಿಗ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಸದೆ ಮಂಗಳಾ ಅಂಗಡಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಂಗಳಾ ಅಂಗಡಿ ಅವರು ಬೆಳಗಾವಿಯ ಮಾಜಿ ಸಂಸದ ಸುರೇಶ್ ಅಂಗಡಿ ಅವರ ಪತ್ನಿ. ಸುರೇಶ್ ಅಂಗಡಿಯವರು ವಿಧಿವಶರಾದ ಬಳಿಕ ಬೆಳಗಾವಿ ಸಂಸದೆಯಾಗಿ ಮಂಗಳಾ ಅಂಗಡಿ ಅವರು ಆಯ್ಕೆಯಾಗಿದ್ದಾರೆ.