ಕೊಲ್ಹಾಪುರ (ಮಹಾರಾಷ್ಟ್ರ): ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಇಬ್ಬರೂ ಆತ್ಮಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇವರಿಬ್ಬರೂ ಕೂಡ ಅಪ್ರಾಪ್ತರಾಗಿದ್ದು, ಇವರ ಪ್ರೀತಿಗೆ ಎರಡೂ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಈ ಜೋಡಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಕೂಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಶಿರೋಲಿ ಪುಲಚಿಯಲ್ಲಿ ವಾಸವಿದ್ದ ಯುವಕ ಅದೇ ಪ್ರದೇಶದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ, ಈ ಸಂಬಂಧ ಇಬ್ಬರ ಕುಟುಂಬದವರಿಂದಲೂ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಯುವಕನ ಮನೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸಂಬಂಧಿಕರು ಗಮನಿಸಿದ್ದಾರೆ. ಕೂಡಲೇ ಇಬ್ಬರನ್ನೂ ಕೊಲ್ಹಾಪುರದ ಸಿಪಿಆರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತ ಯುವಕ-ಯುವತಿಯ ಇಬ್ಬರ ತಂದೆಯಂದಿರು ಒಳ್ಳೆಯ ಸ್ನೇಹಿತರು. ಇಬ್ಬರು ಕುಟುಂಬಗಳಿಗೆ ಭಿನ್ನ ಹಿನ್ನೆಲೆಯಿದ್ದರೂ ಒಬ್ಬೊಬ್ಬರ ಮನೆಗೆ ಒಬ್ಬರು ಬಂದು ಹೋಗುತ್ತಿದ್ದರು. ಹೀಗಾಗಿ ಎರಡು ಕುಟುಂಬಗಳ ನಡುವೆ ಉತ್ತಮ ಸಂಬಂಧ ಇತ್ತು. ಇದರಿಂದಲೇ ಇಬ್ಬರ ನಡುವೆ ಪ್ರೇಮ ಆರಂಭವಾಗಿತ್ತು. ಆದರೆ, ಇಬ್ಬರ ಮಧ್ಯೆ ಪ್ರೀತಿ ಬೆಳೆಯಲು ಶುರುವಾದ ನಂತರ ಈ ಸಂಬಂಧಕ್ಕೆ ಕುಟುಂಬಸ್ಥರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.