ಬೆಂಗಳೂರು: “ಬಿ.ಎಲ್.ಸಂತೋಷ್ ಹೇಳಿದ್ದಕ್ಕಿಂತ ನಮ್ಮ ಸಂಪರ್ಕದಲ್ಲಿ ಹೆಚ್ಚಿನ ಜನ ಇದ್ದಾರೆ” ಎಂದು ಸಂಸದ ಡಿ.ಕೆ.ಸುರೇಶ್ ಹೊಸ ಬಾಂಬ್ ಸಿಡಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಕೂಡ ಬಿಜೆಪಿ ತೊರೆಯಲ್ಲ, ಆದರೆ ಕಾಂಗ್ರೆಸ್ನ 40 ರಿಂದ 45 ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಸಭೆಯಲ್ಲಿ ಬಿ.ಎಲ್.ಸಂತೋಷ್ ಅವರ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿದ ಸ್ಥಾನ ಗೆಲ್ಲುತ್ತದೆನ್ನುವ ವಿಚಾರವಾಗಿ ಮಾತನಾಡಿ, “ಚುನಾವಣೆ ನಡೆಯಲಿ ಆಗ ನೋಡೋಣ” ಎಂದರು. ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸಿ, “ಕಾವೇರಿ ಪ್ರಾಧಿಕಾರ 5,000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಹೇಳಿದೆ. ರಾಜ್ಯದ ರೈತರಿಗೆ ಅನ್ಯಾಯವಾಗುವ ತೀರ್ಮಾನವಾಗಿದೆ. ಸರ್ಕಾರ ರೈತರ ಹಾಗೂ ಕರ್ನಾಟಕದ ರಕ್ಷಣೆ ಮಾಡಬೇಕು ಎಂದು ನಾನೂ ಕೂಡ ದನಿ ಎತ್ತುತ್ತೇನೆ. ನೀರಿಲ್ಲ, ಮಳೆ ಇಲ್ಲ ರೈತರ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದಷ್ಟು ಜರೂರಾಗಿ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಪಿಟಿಷನ್ ಹಾಕಿ ಅದಕ್ಕೆ ತಡೆ ತರಬೇಕು ಎಂಬುದು ನನ್ನ ಒತ್ತಾಯ” ಎಂದರು.
ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡಿದ ಅವರು, “ವಿಶೇಷ ಅಧಿವೇಶನ ಕರೆದಿದ್ದಾರೆ. ಅದರ ಕಾರ್ಯಸೂಚಿ ಗೊತ್ತಿಲ್ಲ. ಮಾಧ್ಯಮದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಅದರ ಬಗ್ಗೆ ಯಾವ ರೀತಿ ಚರ್ಚೆ ಮಾಡುತ್ತಾರೆ ಎಂಬುದನ್ನು ನೋಡಬೇಕು” ಎಂದು ತಿಳಿಸಿದರು.