ಹುಬ್ಬಳ್ಳಿ : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ..? ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿಯೇ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ತನ್ನ ಬಜೆಟ್ನಲ್ಲೂ ಗ್ಯಾರಂಟಿಗಳ ಬಗ್ಗೆ ಘೋಷಣೆ ಮಾಡಿದ್ದರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸುಮಾರು 1.20 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಗಿಮಿಕ್ ಅನ್ನೋದು ಸರಿಯಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಅವರು ಸರ್ಕಾರಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಮಾಡಿದ್ದರು.
ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಮಾಡಿದ್ದರು. ಅದು ಗಿಮಿಕ್ ಅಲ್ವಾ. ಈ ರೀತಿ ಗಿಮಿಕ್ ಅನ್ನೋದನ್ನು ಬಿಟ್ಟು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಸ್ವಾಗತ ಮಾಡಲಿ, ಕೇವಲ ಟೀಕೆ ಮಾಡೋದಲ್ಲ ಎಂದು ವಾಗ್ದಾಳಿ ನಡೆಸಿದರು.ಟೀಕೆ ಮಾಡುವ ಮುಂಚೆ ನಿಮ್ಮ ಪಕ್ಷದ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳಿ.
ವಿಧಾನಸಭೆ, ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗಿಲ್ಲ. ಈಗ ಗ್ಯಾರಂಟಿ ಯೋಜನೆಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗೆ ಆದರೆ ನಮ್ಮ ಗತಿ ಏನು ಎಂಬ ಭಯ ಬಿಜೆಪಿಯವರಿಗೆ ಶುರುವಾಗಿದೆ. ಹಾಗಾಗಿ ಏನಾದರೊಂದು ಮಾತನಾಡಬೇಕು ಎಂದು ಅವರು ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶೆಟ್ಟರ್ ಹೇಳಿದರು.