ಮಂಡ್ಯ: ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಿಖಿಲ್‌ಗೆ ಸಲಹೆ ನೀಡಿದ್ದೇನೆ, ರಾಜಕೀಯ ಸಹವಾಸಕ್ಕೆ ಹೋಗಬೇಡ.
ನಿನಗೆ ಭಗವಂತ ಕೊಟ್ಟಿರೋ ಕಲೆ ಇದೆ ಸಿನಿಮಾ ಮಾಡು ಎಂದು ಹೇಳಿರುವುದಾಗಿ ನಿಖಿಲ್ ಚುನಾವಣೆ ಸ್ಪರ್ಧೆ ಬಗ್ಗೆ ನಿಖಿಲ್ ತಂದೆಯೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಿಖಿಲ್‌ಗೆ ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾದತ್ತ ನಿಖಿಲ್ ಮತ್ತೆ ಮುಖ ಮಾಡಿದ್ದಾನೆ. ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದಾನೆ. ಮಂಡ್ಯ ಸಂಸದ ಚುನಾವಣೆ ಸ್ಪರ್ಧೆಗೂ ಬೇಡಾ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ಸಿದ್ಧನಿರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ಸ್ಪರ್ಧಿಸಿದ್ದ. ಸೋಲು-ಗೆಲುವು ಇರುತ್ತೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.
ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣಾ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ಹೇಳಿರುವೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ತರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ ಎಂದು ಹೆಚ್ಡಿಕೆ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪಕ್ಷನಿಷ್ಠೆ ಯಾರಲ್ಲೂ ಉಳಿದಿಲ್ಲ. ವೈಯಕ್ತಿಕ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಹಾಗಾಗಿ, ಆ ವಿಚಾರಗಳಿಗೆ ನಾನು ಮಹತ್ವ ಕೊಡಲ್ಲ, ತಲೆ ಕೆಡಿಸಿಕೊಳ್ಳಲ್ಲ. ಮಂಡ್ಯದಲ್ಲಿ ಕೆಲವರು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರನ್ನೇ ಕೇಳಬೇಕು, ನಾನು ಯಾರ ಮೇಲೂ ಅನುಮಾನ ಪಡಲ್ಲ. ಪುಟ್ಟರಾಜು ಸದ್ಯ ನಮ್ಮ ಪಕ್ಷದಲ್ಲಿದ್ದಾರೆ. ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ನನ್ನ ವಿರುದ್ಧ ಅಪಾದನೆ ಮಾಡುತ್ತಾರೆ. ಅವರ ಕುಟುಂಬಕ್ಕೆ ದೇವೇಗೌಡರ ಕುಟುಂಬ ಬೆಂಬಲವಾಗಿ ನಿಂತಿತ್ತು. ಇವರನ್ನ ಶಾಸಕರನ್ನಾಗಿ ಮಾಡಲು ಪ್ರತಿನಿತ್ಯ ಮುಂಜಾನೆ ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಿದ್ದೇನೆ. ಅಂಬರೀಶ್ ವಿರುದ್ಧ ಇವರನ್ನು ಗೆಲ್ಲಿಸಿಕೊಂಡು ಬಂದಿದ್ದೆ. ಈಗ ಅವರು ನನಗೆ ಉಪದೇಶ ಮಾಡುತ್ತಾರೆ, ಇವರ ಪಾಪದ ಕೊಡ ತುಂಬಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.