ಬೆಂಗಳೂರು : ನಮ್ಮ ಕಾಲದ ಆರೋಪಗಳನ್ನು ತನಿಖೆ ಮಾಡಿ ಎಂದು ಮುಕ್ತವಾಗಿ ಹೇಳಿದ್ದೇವೆ.
ಆದರೆ ಅವರ ಕಾಲದ ಆರೋಪಗಳ ಬಗ್ಗೆಯೂ ತನಿಖೆ ಮಾಡಬೇಕು, ಅದಕ್ಯಾಕೆ ಹಿಂದೇಟು ಹಾಕುತ್ತಿದ್ದಾರೆ? ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ, ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಹುನ್ನಾರ ಇದರ ಹಿಂದೆ ಇದೆ ಎಂದು ವಿಚಾರಣಾ ಆಯೋಗ ರಚನೆ ಮಾಡಿದ ಸರ್ಕಾರದ ನಡೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3 ಸಕ್ಸಸ್ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ನಾಗಸಂದ್ರದ ಖಾಸಗಿ ಅಪಾರ್ಟ್ಮೆಂಟ್ ನಿವಾಸಿಗಳಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಇಸ್ರೋ ವಿಜ್ಞಾನಿಗಳಾದ ಮಹೇಶ್ ಚಾವ್ಲಾ, ಕಲ್ಪನಾ ಅರವಿಂದ್, ಹಾಗೂ ಆಕಾಂಕ್ಷಾ ಅರವಿಂದ್ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ಮೋದಿ ಆಗಮಿಸಿದ ವೇಳೆ ಪ್ರೋಟೋಕಾಲ್‌ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲ ಸೇವೆ ಮಾಡಲು ಸಾರ್ವಜನಿಕ ಜೀವನಕ್ಕೆ ಬಂದಿದ್ದೇವೆ. ಇಸ್ರೋದಂಥ ಸಂಸ್ಥೆ, ವಿಜ್ಞಾನಿಗಳು ಇಂಥ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಆ ಕೆಲಸವನ್ನು ನಮ್ಮ ನಾಯಕರು ಮಾಡಿದ್ದಾರೆ. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ್ಮ ನಾಯಕರು ಇದ್ದು ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ. ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತಾಡಿ ಸಾಧನೆಗೆ ಕಾರಣರಾದವರನ್ನು ಮುಂದೆ ಬಿಟ್ಟರು. ಇದರರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತರ್ಥವಲ್ಲ ಎಂದು ಹೇಳಿದರು.
ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡ್ತಾರೆ.